ಕಾರವಾರ,(ಜುಲೈ.17): ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರದ ನಡುವೆಯೇ ಕುಮಟಾದ ಗೋಕರ್ಣದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು. ಘಟನೆ ತಿಳಿಯುತ್ತಿದ್ದಂತೆ ಗೋಕರ್ಣ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡದ ಮಣ್ಣು ಸಡಿಲಗೊಂಡು ಕುಸಿದ ಪರಿಣಾಮ ರಸ್ತೆ ಮೇಲೆ ಮಣ್ಣು ಮತ್ತು ಕಲ್ಲುಗಳು ಧರೆಗುರುಳಿದೆ. ಅದೃಷ್ಟವಶಾತ್ ಘಟನೆಯಲ್ಲಿ ತೊಂದರೆ ಸಂಭವಿಸಿಲ್ಲ . ಆದರೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ.
ಭೂಕುಸಿತದ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನುಪರೀಶಿಲಿಸಿದರು. ರಸ್ತೆ ಮೇಲಿದ್ದ ಮಣ್ಣು ಮತ್ತು ಕಲ್ಲುಗಳನ್ನು ತೆರವುಗೊಳಿಸುವ ಕಾರ್ಯವನ್ನು ತ್ವರಿತವಾಗಿ ಆರಂಭಿಸಲಾಗಿದ್ದು, ವಾಹನ ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ನಿನ್ನೆಯಿಂದ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಹಲವೆಡೆ ಮರಗಳು ಉರುಳಿರುವುದು, ರಸ್ತೆಗಳ ಮೇಲೆ ನೀರು ನಿಂತಿರುವುದು ಹಾಗೂ ಸಣ್ಣ ಪ್ರಮಾಣದ ಹಾನಿಗಳು ವರದಿಯಾಗಿವೆ. ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳ ಕಾಲವೂ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಗೋಕರ್ಣ ಪ್ರವಾಸಿ ತಾಣವಾಗಿರುವುದರಿಂದ ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಅಧಿಕಾರಿಗಳು ಸಾರ್ವಜನಿಕರು ಅನಗತ್ಯವಾಗಿ ಗುಡ್ಡ ಪ್ರದೇಶಗಳ ಬಳಿ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ. ಮಳೆಯ ಸಂದರ್ಭದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
