ಜಿಬಿಎ ಚುನಾವಣೆಗೆ ಸುಪ್ರೀಂ ಕೋರ್ಟ್‌ನಿಂದ ರಾಜ್ಯ ಸರ್ಕಾರಕ್ಕೆ ಬಿಗ್ ರಿಲೀಫ್

ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಚುನಾವಣೆ ನಡೆಸಲು 2026ಡಿಸೆಂಬರ್ 31ರವರೆಗೆ ಕಾಲಾವಕಾಶ ನೀಡಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಮೂಲಕ ಸದ್ಯಕ್ಕೆ ಗ್ರೇಟರ್ ಬೆಂಗಳೂರು ಚುನಾವಣೆಯನ್ನು ನಡೆಸುವ ಅನಿವಾರ್ಯತೆ ಇಲ್ಲದಂತಾಗಿದೆ.

ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಪ್ರಸ್ತುತ Special Intensive Revision (SIR) ಪ್ರಕ್ರಿಯೆಯಲ್ಲಿ ಸಾವಿರಾರು ಚುನಾವಣಾ ಸಿಬ್ಬಂದಿ ತೊಡಗಿಸಿಕೊಂಡಿರುವ ಕಾರಣ, ಆಗಸ್ಟ್ 31ರೊಳಗೆ ಚುನಾವಣೆ ನಡೆಸುವುದು ಸಾಧ್ಯವಿಲ್ಲ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.

ಸರ್ಕಾರದ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣೆ ನಡೆಸಲು ಡಿಸೆಂಬರ್ 31ರವರೆಗೆ ಗಡುವು ನೀಡಿದೆ. ಆದರೆ, ಡಿಸೆಂಬರ್ ನಂತರ ಮತ್ತೊಂದು ನೆಪ ಹೇಳಬಾರದು. ಡಿಸೆಂಬರ್ 31ರೊಳಗೆ ಚುನಾವಣೆಯನ್ನು ಪೂರ್ಣಗೊಳಿಸಬೇಕು” ಎಂದು ನ್ಯಾಯಪೀಠ ಸ್ಪಷ್ಟ ಸೂಚನೆ ನೀಡಿದೆ.

ಗ್ರೇಟರ್ ಬೆಂಗಳೂರು ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಮೂರು ಬಾರಿ ಕಾಲಾವಕಾಶ ನೀಡಿದೆ. ಮೊದಲು ಜೂನ್, ನಂತರ ಆಗಸ್ಟ್ ಹಾಗೂ ಇದೀಗ ಡಿಸೆಂಬರ್ ಅಂತ್ಯದವರೆಗೆ ಅವಕಾಶ ನೀಡಲಾಗಿದೆ.

ಸರ್ಕಾರದ ಪ್ರಕಾರ, ಮತದಾರರ ಪಟ್ಟಿಯ SIR ಪ್ರಕ್ರಿಯೆ ನವೆಂಬರ್ ಅಂತ್ಯದವರೆಗೆ ಮುಂದುವರಿಯಲಿದ್ದು, ಚುನಾವಣಾ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲಿ ತೊಡಗಿಸಿಕೊಂಡಿರುವುದರಿಂದ ನಿಗದಿತ ವೇಳಾಪಟ್ಟಿಯಂತೆ ಚುನಾವಣೆ ನಡೆಸುವುದು ಕಷ್ಟಕರವಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಡಿಸೆಂಬರ್ ಅಂತ್ಯದವರೆಗೆ ಕಾಲಾವಕಾಶ ಕೋರಿದ್ದು, ಅದಕ್ಕೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ. ಈಗ ರಾಜ್ಯ ಸರ್ಕಾರವು ಡಿಸೆಂಬರ್ 31ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದ್ದು, ಈ ಗಡುವಿನ ನಂತರ ಮತ್ತಷ್ಟು ಕಾಲಾವಕಾಶ ನೀಡುವ ಸಾಧ್ಯತೆ ಕಡಿಮೆ ಎಂಬ ಸಂದೇಶವನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ.

Exit mobile version