ಪಹಲ್ಗಾಮ್ ದಾಳಿ: ಸಂತೋಷ್ ಲಾಡ್‌ರಿಂದ ಮೋದಿಗೆ ರಾಜೀನಾಮೆ ಒತ್ತಾಯ..!

Film 2025 04 25t215906.917

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 2025ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಲುಕಿದ ಕನ್ನಡಿಗರ ರಕ್ಷಣೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಸರ್ಕಾರ ತುರ್ತು ಕಾರ್ಯಾಚರಣೆ ನಡೆಸಿತು. ಈ ದಾಳಿಯಲ್ಲಿ ಹಲವು ಕನ್ನಡಿಗರು ಸಾವನ್ನಪ್ಪಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ಮತ್ತು ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು ಒದಗಿಸಲಾಯಿತು. ಸಂತೋಷ್ ಲಾಡ್ ಈ ಕಾರ್ಯಾಚರಣೆಯನ್ನು ಮುನ್ನಡೆಸಿದ್ದು, ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸಂತೋಷ್ ಲಾಡ್, ಕಾಶ್ಮೀರಕ್ಕೆ ತೆರಳಿ ಸಂತ್ರಸ್ತರ ರಕ್ಷಣೆಗೆ ಶ್ರಮಿಸಿದ ವೇಳೆ, ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿಯಾದಾಗ ಭಾವುಕರಾದರು. “ನಾನು ನೇರವಾಗಿ ಆಸ್ಪತ್ರೆಗೆ ತೆರಳಿದೆ. ಒಬ್ಬರೊಬ್ಬರು ತಮ್ಮ ಅನುಭವಗಳನ್ನು ಹಂಚಿಕೊಂಡಾಗ, ಅಲ್ಲಿನ ಆತಂಕ ಮತ್ತು ಭಯದ ವಾತಾವರಣವನ್ನು ಕಂಡು ಎಷ್ಟೇ ಗಟ್ಟಿಯಾದ ಮನುಷ್ಯನೂ ಭಾವುಕನಾಗುತ್ತಾನೆ,” ಎಂದು ಲಾಡ್ ಹೇಳಿದ್ದಾರೆ. ತಮ್ಮ ತಂಡದ ಜೊತೆಗೆ ಮಾಧ್ಯಮವರ್ಗದವರೂ ಸಹ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದ್ದಾಗಿ ತಿಳಿಸಿದರು.

ಲಾಡ್, ಕಾಶ್ಮೀರದ ಸ್ಥಳೀಯರು 2,000ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು. ಆದರೆ, ದಾಳಿಯ ನಂತರ “ಹಿಂದೂ-ಹಿಂದೂ” ಎಂಬ ಪದ ಬಳಕೆಯಾಗುತ್ತಿರುವುದನ್ನು ಖಂಡಿಸಿದರು. “ಉಗ್ರರು ದೇಶದೊಳಗೆ ಹೇಗೆ ಬಂದರು? ಯೂನಿಫಾರ್ಮ್ ಧರಿಸಿ, ಬಂದೂಕು ಹಿಡಿದುಕೊಂಡು ಒಳನುಗ್ಗಿದ್ದು ಕೇಂದ್ರದ ಭದ್ರತಾ ವೈಫಲ್ಯವಲ್ಲವೇ? ಅಲ್ಲದೇ ಅಂಗನವಾಡಿ ಶಿಕ್ಷಕರ ವೈಫಲ್ಯವೇ?” ಎಂದು ಕೇಂದ್ರ ಸರ್ಕಾರವನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಸಂತೋಷ್ ಲಾಡ್, ಮಾಧ್ಯಮಗಳು ಕೇಂದ್ರ ಸರ್ಕಾರಕ್ಕೆ ಗಟ್ಟಿಯಾಗಿ ಪ್ರಶ್ನೆ ಕೇಳಬೇಕೆಂದು ಒತ್ತಾಯಿಸಿದರು. “ದೇಶವನ್ನು ಪರಮಾತ್ಮ ನಡೆಸುವುದಿಲ್ಲ. ಪ್ರತಿದಿನ ದೇವರು-ದೇವರು ಎಂದು ತೋರಿಸಿ ದೇಶ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಈ ಭದ್ರತಾ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದರು.

ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಬಿಜೆಪಿ ನಾಯಕರ ನಿರಾಸಕ್ತಿಯನ್ನು ಲಾಡ್ ಖಂಡಿಸಿದರು. “ಹಿಂದೂಗಳೇ ಕೊಲೆಯಾಗಿದ್ದಾರೆ ಎಂದು ಹೇಳುವ ಬಿಜೆಪಿ ನಾಯಕರು 50 ಲಕ್ಷವೋ, ಕೋಟಿ ರೂಪಾಯಿಯೋ ಪರಿಹಾರ ಯಾಕೆ ನೀಡುತ್ತಿಲ್ಲ? 74 ಇಂಚಿನ ಎದೆಯ ನಾಯಕರು ಎಲ್ಲಿ?” ಎಂದು ಕಿಡಿಕಾರಿದರು. ನಾವು ಏನೂ ಹೀರೋ ಅಲ್ಲ, ಆದರೆ ಅವಕಾಶ ಸಿಕ್ಕಾಗ ಕನ್ನಡಿಗರ ರಕ್ಷಣೆಗೆ ಶ್ರಮಿಸಿದ್ದೇನೆ ಎಂದು ತಿಳಿಸಿದರು.

Exit mobile version