ಕರ್ನಾಟಕದಲ್ಲಿ ಬೇಸಿಗೆಯ ಝಳ ಆರಂಭವಾಗುತ್ತಿದ್ದಂತೆಯೇ ಹವಾಮಾನ ಇಲಾಖೆಯಿಂದ ಮಿಶ್ರ ಮುನ್ಸೂಚನೆ ಬಂದಿದೆ. ರಾಜ್ಯಾದ್ಯಂತ ತಾಪಮಾನ ಸಾಮಾನ್ಯಕ್ಕಿಂತ 2-4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದ್ದು, ಈ ವರ್ಷ ಬೇಸಿಗೆ ಇನ್ನಷ್ಟು ಕಠಿಣವಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಇದೇ ವೇಳೆ, ಕೆಲವು ಜಿಲ್ಲೆಗಳಲ್ಲಿ ಫೆಬ್ರವರಿ 26ರವರೆಗೆ ಮಳೆಯ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಉತ್ತರ ಕರ್ನಾಟಕದ ಕೆಲವು ಭಾಗಗಳು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಕೊಪ್ಪಳ, ಗದಗ, ಮಂಗಳೂರು (ದಕ್ಷಿಣ ಕನ್ನಡ) ಮತ್ತು ಬೆಳಗಾವಿ ಸೇರಿದಂತೆ ಜಿಲ್ಲೆಗಳಲ್ಲಿ ಲಘು ಮತ್ತು ಮಧ್ಯಮ ಮಳೆಯೊಂದಿಗೆ ಗುಡುಗು-ಮಿಂಚು ಸಹಿತ ಮಳೆಯ ಸಾಧ್ಯತೆ ಇದೆ. ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದ್ದು, ಸಾರ್ವಜನಿಕರು ಜಾಗರೂಕರಾಗಿರುವಂತೆ ಸೂಚನೆ ನೀಡಲಾಗಿದೆ.
ಮಂಗಳೂರಿನಲ್ಲಿ ಇತ್ತೀಚೆಗೆ ಭಾರೀ ಮಳೆ ಸುರಿದಿದ್ದು, ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನರಿಗೆ ತಂಪು ತಂದಿದೆ. ಇಲ್ಲಿ ಸಹ ಫೆಬ್ರವರಿ 26ರವರೆಗೆ ಮಳೆಯ ಮುನ್ಸೂಚನೆ ಇದೆ. ಬೆಳಗಾವಿಯಲ್ಲೂ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆಗಳಿಗೆ ಉಪಯೋಗವಾಗುವುದು ಎಂದು ಅವರು ಹೇಳಿದ್ದಾರೆ.
ಆದರೆ ಬಿಸಿಲಿನ ತೀವ್ರತೆ ಹೆಚ್ಚುತ್ತಿರುವುದರಿಂದ ದೀರ್ಘಕಾಲ ಬಿಸಿಲಿಗೆ ಒಡ್ಡಿಕೊಳ್ಳುವುದು ತಪ್ಪಿಸಿ. ನೀರು ಸೇವಿಸಿ, ಟೋಪಿ/ಕೊಡೆ ಬಳಸಿ, ಮಕ್ಕಳು ಮತ್ತು ವೃದ್ಧರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ವರ್ಷ ತಾಪಮಾನದ ಏರಿಕೆಯಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂಬ ಆತಂಕವೂ ಇದೆ.





