ಬೆಂಗಳೂರು, ಫೆಬ್ರವರಿ 14: ರಾಜ್ಯದಾದ್ಯಂತ ಕಳೆದ ಹಲವು ದಿನಗಳಿಂದ ಮುಂದುವರಿದಿರುವ ಒಣಹವೆ ಇನ್ನೂ ಮೂರು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡು ಭಾಗಗಳಲ್ಲಿಯೂ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂಬ ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಬೆಳಿಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ತೀವ್ರ ಚಳಿ ಅನುಭವವಾಗುತ್ತಿದೆ. ವಿಶೇಷವಾಗಿ ಉತ್ತರ ಒಳನಾಡು ಭಾಗಗಳಲ್ಲಿ ಚಳಿ ತೀವ್ರವಾಗಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಸ್ಥಿತಿ
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದೂ ಸಹ ಒಣಹವೆ ಮುಂದುವರಿಯಲಿದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಕರಾವಳಿ ಭಾಗಗಳಲ್ಲಿ ತೇವಾಂಶ ಹೆಚ್ಚಿರುತ್ತದಾದರೂ, ಕಳೆದ ಕೆಲವು ದಿನಗಳಿಂದ ಗಾಳಿಯಲ್ಲಿ ತೇವಾಂಶ ಪ್ರಮಾಣ ಕಡಿಮೆಯಾಗಿ ಶುಷ್ಕ ವಾತಾವರಣ ಉಂಟಾಗಿದೆ.
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಇಲ್ಲ. ಬೆಳಿಗ್ಗೆ ಮಂಜು ಕಾಣಿಸಿಕೊಂಡರೂ ಮಧ್ಯಾಹ್ನ ವೇಳೆಗೆ ಸೂರ್ಯನ ತಾಪಮಾನ ಹೆಚ್ಚಾಗಿತ್ತಿರುವ ಸ್ಥಿತಿ ಕಂಡುಬರುತ್ತಿದೆ.
ದಕ್ಷಿಣ ಒಳನಾಡಿನಲ್ಲಿ ಮಳೆ ಲಕ್ಷಣವಿಲ್ಲ
ಮೈಸೂರು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಹಾಗೂ ಚಿತ್ರದುರ್ಗ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ರೈತರು ನೀರಾವರಿ ವ್ಯವಸ್ಥೆಯ ಮೇಲೆ ಹೆಚ್ಚಿನ ಗಮನ ಹರಿಸುವುದು ಅಗತ್ಯವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಉತ್ತರ ಒಳನಾಡು ಭಾಗದಲ್ಲಿ ಚಳಿ ತೀವ್ರ
ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದಲೇ ತೀವ್ರ ಚಳಿ ಕಾಣಿಸಿಕೊಂಡಿದೆ. ಈ ಭಾಗಗಳಲ್ಲಿ ಬೆಳಿಗ್ಗೆ ಸಮಯದಲ್ಲಿ ತಾಪಮಾನ ಗಣನೀಯವಾಗಿ ಕುಸಿಯುತ್ತಿದ್ದು, ಜನರು ಚಳಿ ತಡೆಗಟ್ಟಲು ಬೆಚ್ಚಗಿನ ಉಡುಪು ಧರಿಸುವುದು ಅವಶ್ಯಕವಾಗಿದೆ.
ಬೆಂಗಳೂರಿನಲ್ಲಿ ತಾಪಮಾನ ಏರಿಕೆ–ಇಳಿಕೆ
ರಾಜಧಾನಿ ಬೆಂಗಳೂರಿನಲ್ಲಿ ಇಂದು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಗಿಂತ ಚಳಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ, ಬೆಳಿಗ್ಗೆ ಮತ್ತು ರಾತ್ರಿ ವೇಳೆ ತಂಪಿನ ಅನುಭವ ಮುಂದುವರಿಯುತ್ತಿದೆ.
ಶುಷ್ಕ ಹವಾಮಾನದಿಂದ ಗಂಟಲು ನೋವು, ಜ್ವರ, ಚರ್ಮದ ಒಣಗುವಿಕೆ ಮೊದಲಾದ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಆದ್ದರಿಂದ ಸಾಕಷ್ಟು ನೀರು ಸೇವಿಸುವುದು, ಬಿಸಿ ಆಹಾರ ಸೇವನೆ ಮಾಡುವುದು ಮತ್ತು ಬೆಚ್ಚಗಿನ ಉಡುಪು ಧರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಮುಂದಿನ ಮೂರು ದಿನಗಳ ಮುನ್ಸೂಚನೆ
ರಾಜ್ಯದಾದ್ಯಂತ ಇನ್ನೂ ಮೂರು ದಿನಗಳವರೆಗೆ ಮಳೆ ಸಾಧ್ಯತೆ ಕಡಿಮೆ ಇದ್ದು, ಇದೇ ರೀತಿಯ ಒಣಹವೆಯ ವಾತಾವರಣ ಮುಂದುವರಿಯಲಿದೆ. ತಾಪಮಾನದಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸದಿದ್ದರೂ, ಬೆಳಿಗ್ಗೆ ಚಳಿ ಮತ್ತು ಮಧ್ಯಾಹ್ನ ಬಿಸಿಲಿನ ತಾಪಮಾನದಲ್ಲಿ ವ್ಯತ್ಯಾಸವಿರುತ್ತದೆ.
