ದಾವಣಗೆರೆ: ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದೀಗ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಹಾರ್ಟ್ ಆಟ್ಯಾಕ್‌ಗೆ ಶಿಕ್ಷಕ ಬಲಿಯಾಗಿದ್ದಾರೆ. ಬಿವಿಎಸ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ರವಿಕುಮಾರ್ (38) ಅವರು ಶಾಲೆಯಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ದುರಂತ ಸಾವನ್ನಪ್ಪಿದ್ದಾರೆ.
ರವಿಕುಮಾರ್ ಅವರು ಹೊನ್ನಾಳಿ ಪಟ್ಟಣದ ದುರ್ಗಿಗುಡಿ ನಿವಾಸಿಯಾಗಿದ್ದು, ಎಂಟು ವರ್ಷದ ಪುತ್ರಿ ಮತ್ತು ಆರು ವರ್ಷದ ಮಗನಿದ್ದಾನೆ. ಎಂದಿನಂತೆ ಶಾಲೆಗೆ ಆಗಮಿಸಿದ್ದ ಅವರು, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಕುರಿತು ಪಾಠ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸಹ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ, ಆಸ್ಪತ್ರೆಗೆ ತಲುಪುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ರವಿಕುಮಾರ್ ಅವರು ಬಿವಿಎಸ್ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಘಟನೆಯು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯರಲ್ಲಿ ಆಘಾತವನ್ನುಂಟು ಮಾಡಿದೆ. “ರವಿಕುಮಾರ್ ಸರ್ ಯಾವಾಗಲೂ ಉತ್ಸಾಹದಿಂದ ಇರುತ್ತಿದ್ದರು. ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿದಿರಲಿಲ್ಲ,” ಎಂದು ಶಾಲೆಯ ಒಬ್ಬ ಸಹ ಶಿಕ್ಷಕ ಭಾವುಕರಾಗಿ ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜುಲೈ 9ರಂದು ದಾವಣಗೆರೆಯ ಜಯನಗರದಲ್ಲಿ 22 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಕಳೆದ ಮೂರು ತಿಂಗಳಲ್ಲಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯೊಂದರಲ್ಲೇ 75 ಕ್ಕೂ ಹೆಚ್ಚು ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.