ರಾಜ್ಯಾದ್ಯಂತ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರೀಕ್ಷೆಗಿಂತ ಮುಂಚೆಯೇ ಪ್ರಶ್ನೆ ಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಗಂಭೀರ ಆರೋಪದ ಮೇಲೆ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಒಟ್ಟು ಎಂಟು ಜನರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು:
ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕರು ಮತ್ತು ಶಾಲಾ ಮುಖ್ಯಸ್ಥರೇ ಈ ಕಾನೂನುಬಾಹಿರ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಬಂಧಿತ ಎಂಟು ಜನರಲ್ಲಿ ಆರು ಮಂದಿ ಶಿಕ್ಷಣ ಕ್ಷೇತ್ರದವರಾಗಿದ್ದರೆ, ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಗಿರೀಶ್ ವಿ.ಡಿ: ಮುಖ್ಯೋಪಾಧ್ಯಾಯರು-ತುಮಕೂರು, ಅಮ್ಜದ್ ಖಾನ್: ಸಹ ಶಿಕ್ಷಕರು-ರಾಮನಗರ, ಶಾಹಿದಾ ಬೇಗಂ: ಮುಖ್ಯ ಶಿಕ್ಷಕಿ-ಕಲಬುರಗಿ, ಫಾಹ್ಮಿದಾ: ಸಹ ಶಿಕ್ಷಕಿ-ಕಲಬುರಗಿ, ಮೊಹಮ್ಮದ್ ಸಿರಾಜುದ್ದೀನ್: ಶಿಕ್ಷಕರು-ಕಲಬುರಗಿ, ಫರ್ಜಾನಾ ಬೇಗಂ: ಶಿಕ್ಷಕಿ-ಕಲಬುರಗಿ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಆರೋಪಿಗಳಲ್ಲಿ ಬಹುತೇಕರು ಕಲಬುರಗಿ ಮೂಲದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಮೊಬೈಲ್ ಮೂಲಕ ಹಂಚಿಕೊಂಡಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ವೈರಲ್ ಆಗಿದ್ದು ಹೇಗೆ ?
ಆರೋಪಿಗಳು ಇನ್ಸ್ಟಾಗ್ರಾಂ (Instagram) ಮತ್ತು ಟೆಲಿಗ್ರಾಂ (Telegram) ಅಪ್ಲಿಕೇಶನ್ಗಳನ್ನು ಈ ಕೃತ್ಯಕ್ಕಾಗಿ ಬಳಸಿಕೊಂಡಿದ್ದಾರೆ. ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ತೆಗೆದು ಈ ಆಪ್ಗಳಲ್ಲಿರುವ ವಿವಿಧ ಗುಂಪುಗಳಿಗೆ ಹರಿಯಬಿಡಲಾಗಿತ್ತು. ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ತಂಡದ ನೆರವಿನೊಂದಿಗೆ ಈ ವೈರಲ್ ಸಂದೇಶಗಳ ಮೂಲವನ್ನು ಪತ್ತೆ ಹಚ್ಚುವಾಗ ಈ ಶಿಕ್ಷಕರ ಜಾಲ ಪತ್ತೆಯಾಗಿದೆ. ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಕೂಡ ಪರೀಕ್ಷೆಯ ಅಂಕಗಳ ಲಾಭಕ್ಕಾಗಿ ಇವುಗಳನ್ನು ವೈರಲ್ ಮಾಡಿದ್ದರು ಎನ್ನಲಾಗಿದ್ದು, ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ತನಿಖೆ ತೀವ್ರ:
ಬಂಧಿತರ ಬಳಿಯಿದ್ದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಡಿಜಿಟಲ್ ಪುರಾವೆಗಳಿಗಾಗಿ ಫೋರೆನ್ಸಿಕ್ ತನಿಖೆಗೆ ಕಳುಹಿಸಿದ್ದಾರೆ. ಯಾರಿಂದ ಯಾರಿಗೆ ಮೊದಲು ಪತ್ರಿಕೆ ತಲುಪಿತು ? ಇದರ ಹಿಂದೆ ಹಣದ ವ್ಯವಹಾರ ನಡೆದಿದೆಯೇ ? ಅಥವಾ ಖಾಸಗಿ ಟ್ಯೂಷನ್ ಮಾಫಿಯಾ ಕೈವಾಡವಿದೆಯೇ ? ಎಂಬ ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ.
ಈ ಪ್ರಕರಣವು ಶಿಕ್ಷಣ ಇಲಾಖೆಗೆ ಮುಜುಗರ ತಂದಿದ್ದು, ಮುಂದೆ ನಡೆಯಲಿರುವ ವಾರ್ಷಿಕ ಪರೀಕ್ಷೆಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
