ಚಿಕ್ಕಮಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಪ್ರೀತಿ, ಮೋಸ ಇವೆಲ್ಲವೂ ಸೋಶಿಯಲ್ ಮೀಡಿಯಾದ ಮೂಲಕವೇ ನಡೆಯುತ್ತಿವೆ. ಇದೇ ಸಾಲಿನಲ್ಲಿ ಈಗ ಕೋಲಾರದ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ತನ್ನ ‘ಪ್ರೀತಿ’ಯನ್ನು ಭೇಟಿಯಾಗಲು ಚಿಕ್ಕಮಗಳೂರಿಗೆ ಬಂದು ದಿಗ್ಭ್ರಮೆಗೊಂಡಿದ್ದಾನೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ 25 ವರ್ಷದ ನವನೀತ್, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 35 ವರ್ಷದ ಅನ್ನಪೂರ್ಣ ಎಂಬ ಮಹಿಳೆಯೊಂದಿಗೆ ಪ್ರೀತಿಯ ಸಂಬಂಧ ಬೆಳೆಸಿಕೊಂಡಿದ್ದ. ಕಳೆದ ಒಂದು ವರ್ಷದಿಂದ ಚಾಟಿಂಗ್ ಮೂಲಕ ಇವರಿಬ್ಬರ ಸಂಬಂಧ ಬೆಳೆದಿತ್ತು. ಅನ್ನಪೂರ್ಣ ಒಮ್ಮೆ ನವನೀತ್‌ನ ಮನೆಗೆ ಭೇಟಿ ನೀಡಿ ಮೂರು ದಿನಗಳ ಕಾಲ ಇದ್ದಳು, ಇದರಿಂದ ನವನೀತ್ ಆಕೆಯನ್ನು ಸಂಪೂರ್ಣವಾಗಿ ನಂಬಿದ್ದನು. ಆಕೆಯ ಮಾತುಗಳಿಗೆ ಮನಸೋತು, ತಾನು ಒಂಟಿಯಾಗಿದ್ದೇನೆ, ಮದುವೆಯಾಗಿಲ್ಲ ಎಂದು ಆಕೆ ಹೇಳಿದ್ದರಿಂದ, ಇವರಿಬ್ಬರು ಮದುವೆಯಾಗುವ ಪ್ಲಾನ್ ಮಾಡಿಕೊಂಡಿದ್ದರು.
ನವನೀತ್‌ನ ಪ್ರಕಾರ, ಅನ್ನಪೂರ್ಣ ಮೊದಲಿಗೆ ತಕ್ಷಣವೇ ಮದುವೆಯಾಗೋಣ ಎಂದು ಹೇಳಿದ್ದಳು. ಆದರೆ, ಕೆಲ ದಿನಗಳ ಬಳಿಕ ಆರು ತಿಂಗಳ ನಂತರ ಮದುವೆಯಾಗುವುದಾಗಿ ತಿಳಿಸಿದ್ದಳು. ಇದಕ್ಕೂ ನವನೀತ್ ಒಪ್ಪಿಕೊಂಡಿದ್ದ. ಆಕೆಯ ವರ್ತನೆ ಮತ್ತು ಮನೆಗೆ ಭೇಟಿ ನೀಡಿದ್ದಕ್ಕಾಗಿ, ನವನೀತ್ ಕುಟುಂಬವೂ ಈ ಸಂಬಂಧಕ್ಕೆ ಒಪ್ಪಿಕೊಂಡಿದ್ದರು. ಆದರೆ, ಒಂದು ದಿನ ಅನ್ನಪೂರ್ಣ ತನ್ನ ಊರಿಗೆ ಹೋಗಿ, “ಅಣ್ಣನ ಮಗನಿಗೆ ಆರೋಗ್ಯ ಸಮಸ್ಯೆ ಇದೆ” ಎಂದು ಕರೆ ಮಾಡಿ ಹಣ ಕೇಳಿದಳು. ನವನೀತ್ ಆಕೆಯ ಮಾತನ್ನು ನಂಬಿ ಹಣ ಒದಗಿಸಲು ಯತ್ನಿಸಿದ. ಆದರೆ, ಆಕೆ ಇದ್ದಕ್ಕಿದ್ದಂತೆ ತನ್ನನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿದಳು ಎಂದು ಆರೋಪಿಸಿದ್ದಾನೆ.
ಈ ಘಟನೆಯಿಂದ ಆಘಾತಕ್ಕೊಳಗಾದ ನವನೀತ್, ಆಕೆ ಏಕೆ ತನ್ನನ್ನು ಬ್ಲಾಕ್ ಮಾಡಿದಳು ಎಂದು ತಿಳಿಯಲು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮಕ್ಕೆ ಆಕೆಯ ಮನೆಗೆ ಭೇಟಿ ನೀಡಿದ್ದನು. ಆದರೆ, ಅನ್ನಪೂರ್ಣಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಮೂರು ಮಕ್ಕಳಿದ್ದವು. ಆಕೆಯ ಪತಿಯೂ ಮನೆಯಲ್ಲಿದ್ದ. ತಾನು ಒಂಟಿಯಾಗಿದ್ದೇನೆ ಎಂದು ಹೇಳಿ, ಪ್ರೀತಿಯ ನಾಟಕವಾಡಿದ್ದ ಅನ್ನಪೂರ್ಣನನ್ನು ಕಂಡು ನವನೀತ್ ದಿಗ್ಭ್ರಮೆಗೊಂಡ. ಆಕೆಯ ಮೋಸದಿಂದ ತಾನು ಹಣ, ಭಾವನೆಗಳು, ಮತ್ತು ವಿಶ್ವಾಸವನ್ನು ಕಳೆದುಕೊಂಡಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.