ಕಾರು ಡ್ರೈವರ್ ಆತ್ಮಹತ್ಯೆ: ಸಂಸದ ಸುಧಾಕರ್ ವಿರುದ್ದ ಪ್ರಕರಣ ದಾಖಲು

Untitled design 2025 08 07t211405.947

ಚಿಕ್ಕಬಳ್ಳಾಪುರ, ಆಗಸ್ಟ್ 07, 2025: ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತಿ ಆವರಣದಲ್ಲಿ ಕಾರು ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಮೃತ ಬಾಬು ಬರೆದುಹೋಗಿದ್ದ ಡೆತ್ ನೋಟ್ (Death Note)ನಲ್ಲಿ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ (Dr. K Sudhakar) ಹೆಸರನ್ನು ಉಲ್ಲೇಖಿಸಿದ್ದು, ಬಾಬು ಪತ್ನಿ ಶಿಲ್ಪಾ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂಸದ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 108, 352, 351(2) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(2) ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಸಂಸದ ಸುಧಾಕರ್‌ರನ್ನು ಎ1 ಆರೋಪಿಯಾಗಿ, ನಾಗೇಶ್‌ರನ್ನು ಎ2 ಮತ್ತು ಮಂಜುನಾಥ್‌ರನ್ನು ಎ3 ಆರೋಪಿಯಾಗಿ ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ

ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರನಾಗಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಾಬು, ಆಗಸ್ಟ್ 07 ರಂದು ಜಿಲ್ಲಾ ಪಂಚಾಯತಿ ಸಭಾಂಗಣದ ಪಕ್ಕದ ಹೊಂಗೆ ಮರದ ಬಳಿ ಸರ್ಕಾರಿ ಕಾರನ್ನು ನಿಲ್ಲಿಸಿದ್ದಾನೆ. ಕಾರಿನ ಮೇಲೆ ಹತ್ತಿ, ಮರಕ್ಕೆ ನೇಣು ಕಟ್ಟಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆಯ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತನಿಖೆಯ ವೇಳೆ, ಬಾಬುವಿನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದ್ದು, ಅದರ ಮೊದಲ ಸಾಲಿನಲ್ಲೇ ಸಂಸದ ಡಾ. ಕೆ. ಸುಧಾಕರ್, ನಾಗೇಶ್ ಮತ್ತು ಮಂಜುನಾಥ್‌ರನ್ನು ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಿದ್ದಾನೆ.

ಡೆತ್ ನೋಟ್‌ನ ವಿವರ

ಡೆತ್ ನೋಟ್‌ನಲ್ಲಿ ಬಾಬು, “ಡಾ. ಕೆ. ಸುಧಾಕರ್, ನಾಗೇಶ್ ಮತ್ತು ಮಂಜುನಾಥ್‌ರ ಮೇಲೆ ತನಿಖೆ ನಡೆಸಿ. ನನ್ನ ಹೆಂಡತಿ ಶಿಲ್ಪಾಗೆ ನ್ಯಾಯ ಕೊಡಿಸಿ. ಇವರು ನನ್ನಿಂದ 35 ಲಕ್ಷ ರೂಪಾಯಿ ತೆಗೆದುಕೊಂಡಿದ್ದಾರೆ. ಮೋಸಕ್ಕೆ ಒಳಗಾದ ಕಾರಣ ನಾನು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ” ಎಂದು ಬರೆದಿದ್ದಾರೆ. ಇದರ ಜೊತೆಗೆ, ಶಾಸಕ ಪ್ರದೀಪ್, ಜಿಲ್ಲಾಧಿಕಾರಿ, ಎಸ್‌ಪಿ, ಸಿಇಒ ಮತ್ತು ಎಡಿಸಿ ಭಾಸ್ಕರ್‌ರವರಿಗೆ ತನ್ನ ಪತ್ನಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಡೆತ್ ನೋಟ್‌ನ ಆಧಾರದ ಮೇಲೆ, ಮೃತನ ಪತ್ನಿ ಶಿಲ್ಪಾ ದೂರು ದಾಖಲಿಸಿದ್ದಾರೆ.

ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸ್ ಠಾಣೆಯ ಮುಂದೆ ತೀವ್ರ ಗದ್ದಲ ನಡೆಯಿತು. ಕಾಂಗ್ರೆಸ್ ಪಕ್ಷವು ಸಂಸದ ಸುಧಾಕರ್‌ ಅವರ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಬೇಕೆಂದು ಒತ್ತಾಯಿಸಿತು, ಆದರೆ ಬಿಜೆಪಿಯು ಅದನ್ನು ವಿರೋಧಿಸಿತು. ಎರಡೂ ಪಕ್ಷಗಳು ಪೊಲೀಸರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದವು. ಅಂತಿಮವಾಗಿ, ಪೊಲೀಸರು ಡೆತ್ ನೋಟ್‌ನ ಆಧಾರದ ಮೇಲೆ ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಹಣದ ವಂಚನೆ, ಮಾನಸಿಕ ಕಿರುಕುಳ, ನಿಂದನೆ ಮತ್ತು ಆತ್ಮಹತ್ಯೆಗೆ ಪ್ರೇರಣೆ ಆರೋಪಗಳು ಸೇರಿವೆ.

Exit mobile version