ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಇಂದು (ಶನಿವಾರ) ಬೆಳ್ಳಂ ಬೆಳಗ್ಗೆ ಭೀಕರ ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವರು ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೆಲಮಂಗಲ, ದೇವನಹಳ್ಳಿ,ಕಾರವಾರ ಮತ್ತು ಯಾದಗಿರಿಯಲ್ಲಿ ನಡೆದ ಈ ದುರ್ಘಟನೆಗಳು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷತೆಯ ಕೊರತೆಯನ್ನು ಮತ್ತೊಮ್ಮೆ ಒತ್ತಿಹೇಳಿವೆ.
ನೆಲಮಂಗಲ: ಕೆಎಸ್‌ಆರ್‌ಟಿಸಿ ಬಸ್-ಕುರಿ ಲಾರಿ ನಡುವೆ ಭೀಕರ ಡಿಕ್ಕಿ
ರಾಷ್ಟ್ರೀಯ ಹೆದ್ದಾರಿ 48ರ ಗುಂಡೇನಹಳ್ಳಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕುರಿ ಸಾಗಾಟದ ಲಾರಿಯ ನಡುವೆ ಭೀಕರ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಭಾಗ ಜಕಂಗೊಂಡಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಪೊಲೀಸರು ಘಟನೆಯನ್ನು ಪರಿಶೀಲಿಸಿ, ತನಿಖೆ ಆರಂಭಿಸಿದ್ದಾರೆ.
ದೇವನಹಳ್ಳಿ: ಕ್ಯಾಂಟರ್ ಗೆ ಬುಲೆರೋ ವಾಹನ ಡಿಕ್ಕಿ.. ಓರ್ವ ಸಾವು
ದೇವನಹಳ್ಳಿಯ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯ ಗೋಕರೆ ಬಳಿ ಬುಲೆರೋ ವಾಹನವು ತಮಿಳುನಾಡು ಮೂಲದ ಕ್ಯಾಂಟರ್ (TN24AX1378) ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಬುಲೆರೋದಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಸಹ-ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಬುಲೆರೋ (KA06AC6678) ದೇವನಹಳ್ಳಿಯಿಂದ ಕೋಲಾರಗೆ ಟೊಮೆಟೊ ಸಾಗಿಸುತ್ತಿತ್ತು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಆರಂಭಿಸಿದ್ದಾರೆ.
ಟ್ಯಾಂಕರ್ ಲಾರಿ-ಕಾರ್ ನಡುವೆ ಭೀಕರ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು
ಯಾದಗಿರಿ ತಾಲೂಕಿನ ನೀಲಹಳ್ಳಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಶನಿವಾರ ನಸುಕಿನ ಜಾವದಲ್ಲಿ ಟ್ಯಾಂಕರ್ ಲಾರಿಯೊಂದಿಗೆ ಕಾರ್ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೈದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ.
ಬೆಳ್ಳಂ ಬೆಳಗ್ಗೆ ಕೆಟ್ಟುನಿಂತಿದ್ದ ಲಾರಿಗೆ KSRTC ಬಸ್ ಡಿಕ್ಕಿ: 3 ಸಾ*ವು, 7 ಜನರ ಸ್ಥಿತಿ ಗಂಭೀರ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್‌ನಲ್ಲಿ ಇಂದು (ಶನಿವಾರ) ಬೆಳಗ್ಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಬಾಗಲಕೋಟೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (KA 19 F 3470) ರಸ್ತೆಯಂಚಿನಲ್ಲಿ ಕೆಟ್ಟು ನಿಂತಿದ್ದ ಕೇರಳ ಮೂಲದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಸಂಭವಿಸಿದೆ. ಯಲ್ಲಾಪುರ-ಅಂಕೋಲಾ ರಸ್ತೆಯು ದಟ್ಟ ಕಾಡು ಮತ್ತು ಘಟ್ಟ ಪ್ರದೇಶವನ್ನು ಒಳಗೊಂಡಿರುವ ಅಪಾಯಕಾರಿ ಹೆದ್ದಾರಿಯಾಗಿದೆ. ಲಾರಿಯ ಚಾಲಕ ಇಂಡಿಕೇಟರ್ ಹಾಕದೆ, ಕತ್ತಲೆಯಲ್ಲಿ ರಸ್ತೆಯಂಚಿನಲ್ಲಿ ಲಾರಿಯನ್ನು ನಿಲ್ಲಿಸಿದ್ದ ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಬಸ್‌ನ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮದ ನಿಲವ್ವ ಹರದೊಳ್ಳಿ (40), ಜಾಲಿಹಾಳ ಗ್ರಾಮದ ಗಿರಿಜವ್ವ ಬೂದನ್ನವರ (38) ಮತ್ತು 45 ವರ್ಷ ವಯಸ್ಸಿನ ಗುರುತು ಪತ್ತೆಯಾಗದ ವ್ಯಕ್ತಿಯೆಂದು ಗುರುತಿಸಲಾಗಿದೆ. ಗಾಯಾಳುಗಳಲ್ಲಿ ಚಿಕ್ಕ ಮಕ್ಕಳೂ ಸೇರಿದ್ದಾರೆ. ಗಾಯಾಳುಗಳೆಲ್ಲರೂ ಬಾಗಲಕೋಟೆ ಮೂಲದವರಾಗಿದ್ದಾರೆ.
ಬಸ್ ಚಾಲಕ ಆಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ್ ಕುನ್ನೂರು ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.