ಬೆಂಗಳೂರು: ಕರ್ನಾಟಕದಾದ್ಯಂತ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಯ ತೀವ್ರತೆ ಕೊಂಚ ತಗ್ಗಿದ್ದರೂ, ಆಗಸ್ಟ್ 05ರಿಂದ ಮತ್ತೆ ರಾಜ್ಯವ್ಯಾಪಿ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 200 ಮಿಮೀ ಮಳೆಯ ನಿರೀಕ್ಷೆಯಿದ್ದು, ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆಯಾಗಬಹುದು.
ಜಿಲ್ಲಾವಾರು ಮಳೆಯ ಮುನ್ಸೂಚನೆ:
- ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು: ಆಗಸ್ಟ್ 06ರಿಂದ ಮೂರು ದಿನಗಳ ಕಾಲ ಭಾರೀ ಮಳೆ, ಬಿರುಗಾಳಿಯೊಂದಿಗೆ ಆರೆಂಜ್ ಅಲರ್ಟ್.
- ಹಾಸನ, ಕೊಡಗು, ದಕ್ಷಿಣ ಕನ್ನಡ: ಆಗಸ್ಟ್ 06ರಿಂದ ಮೂರು ದಿನ ಭಾರೀ ಮಳೆ, ಆರೆಂಜ್ ಅಲರ್ಟ್.
- ಉಡುಪಿ, ಮೈಸೂರು: ಆಗಸ್ಟ್ 05ರಿಂದ 4 ದಿನ ಯೆಲ್ಲೋ ಅಲರ್ಟ್, ಭಾರೀ ಮಳೆ.
- ಗದಗ, ಚಿಕ್ಕಮಗಳೂರು, ಹಾವೇರಿ, ಚಾಮರಾಜನಗರ: ಮೂರು ದಿನ ಯೆಲ್ಲೋ ಅಲರ್ಟ್, ಭಾರೀ ಮಳೆ.
- ಕೊಪ್ಪಳ, ರಾಯಚೂರು, ಶಿವಮೊಗ್ಗ: ಎರಡು ದಿನ ಯೆಲ್ಲೋ ಅಲರ್ಟ್, ಭಾರೀ ಮಳೆ.
- ಬೆಂಗಳೂರು ನಗರ, ರಾಮನಗರ, ಮಂಡ್ಯ: ಒಂದು ದಿನ ಯೆಲ್ಲೋ ಅಲರ್ಟ್, ಭಾರೀ ಮಳೆ.
ಗಾಳಿಯ ವೇಗ ಗಂಟೆಗೆ 40-50 ಕಿಮೀ ತಲುಪಬಹುದು ಎಂದು IMD ವರದಿ ತಿಳಿಸಿದೆ. ಈ ಪರಿಸ್ಥಿತಿಯಿಂದಾಗಿ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಶಾಲೆಗಳಿಗೆ ರಜೆ ಘೋಷಣೆಯಾಗುವ ಸಾಧ್ಯತೆಯಿದೆ.
ಶಾಲೆಗಳಿಗೆ ರಜೆ ಸಾಧ್ಯತೆ:
ಕಳೆದ ಒಂದೂವರೆ ತಿಂಗಳಿಂದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ಕೊಡಗು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಮತ್ತು ಚಿಕ್ಕಮಗಳೂರಿನಲ್ಲಿ ಭಾರೀ ಮಳೆಯಿಂದ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ಆಗಸ್ಟ್ 05ರಿಂದ ಮತ್ತೆ ಇಂತಹ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದ್ದು, ಶಾಲೆಗಳಿಗೆ ರಜೆ ಘೋಷಣೆಯಾಗಬಹುದು. ಜಿಲ್ಲಾಡಳಿತಗಳು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಿವೆ.
ಒಳನಾಡಿನಲ್ಲಿ ಭಾರೀ ಮಳೆ:
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಮೇಲ್ಮೈಯಲ್ಲಿ ಉಂಟಾದ ವಾತಾವರಣ ಬದಲಾವಣೆಯಿಂದ ಮುಂಗಾರು ಮಳೆಯ ತೀವ್ರತೆ ಹೆಚ್ಚಾಗಿದೆ. ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಂದು ವಾರದವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ವಾರಾಂತ್ಯಕ್ಕೆ ಜೋರು ಮಳೆ:
ಬೆಂಗಳೂರಿನಲ್ಲಿ ಈಗಾಗಲೇ ಮಬ್ಬುಗೊಂಗಿದ ವಾತಾವರಣವಿದ್ದು, ವಾರಾಂತ್ಯದಲ್ಲಿ ಭಾರೀ ಮಳೆಯಾಗಲಿದೆ. ಕನಿಷ್ಠ ತಾಪಮಾನ 21°C ಮತ್ತು ಗರಿಷ್ಠ ತಾಪಮಾನ 30°C ಆಸುಪಾಸಿನಲ್ಲಿ ಇರಲಿದೆ ಎಂದು IMD ತಿಳಿಸಿದೆ.
ರೈತರಿಗೆ ಸಲಹೆ:
ಕೊಡಗು, ಶಿವಮೊಗ್ಗ, ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಕಾಫಿ ಮತ್ತು ಭತ್ತದ ಬೆಳೆಗಳಿಗೆ ಹಾನಿಯಾಗಿದೆ. ರೈತರಿಗೆ ತಮ್ಮ ಕೃಷಿಭೂಮಿಯನ್ನು ಸುರಕ್ಷಿತಗೊಳಿಸಲು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಕೃಷಿ ಇಲಾಖೆ ಸೂಚಿಸಿದೆ.