ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಕೊಂಚ ಕಡಿಮೆಯಾಗಿದೆ. ಕಳೆದ ಮೂರು ವಾರಗಳಿಂದ ಚಳಿ, ಮಬ್ಬು, ಮತ್ತು ಭಾರೀ ಮಳೆಯಿಂದ ಕಂಗಾಲಾಗಿದ್ದ ಜನರಿಗೆ ಈಗ ಸ್ವಲ್ಪ ನೆಮ್ಮದಿ ಸಿಕ್ಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಕಾಣಿಸುತ್ತಿದ್ದರೂ, ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದೆ. ಇತರ ಜಿಲ್ಲೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆಯ ನಿರೀಕ್ಷೆ ಇದೆ.
ಮಲೆನಾಡಿನಲ್ಲಿ ಭಾರೀ ಮಳೆ, ಯೆಲ್ಲೋ ಅಲರ್ಟ್
ಚಿಕ್ಕಮಗಳೂರು, ಕೊಡಗು, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಜುಲೈ 31ರಿಂದ ಮುಂದಿನ ಎರಡು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದರೆ, ಶಾಲೆಗಳು ಮತ್ತು ಅಂಗನವಾಡಿಗಳಿಗೆ ಮೂರು ದಿನ ರಜೆ ಘೋಷಿಸುವ ಸಂಭವ ಇದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ತಿಂಗಳಿನಿಂದ ಭಾರೀ ಮಳೆ ದಾಖಲಾಗಿದ್ದು, ರಾಜ್ಯದ ಜಲಾಶಯಗಳು ಭರ್ತಿಯಾಗಿವೆ.
ಬೆಂಗಳೂರಿನಲ್ಲಿ ಮಳೆಯ ಸ್ಥಿತಿ:
ಬೆಂಗಳೂರಿನಲ್ಲಿ ಮುಂದಿನ ಏಳು ದಿನಗಳವರೆಗೆ ಮಬ್ಬು ವಾತಾವರಣ ಮುಂದುವರಿಯಲಿದೆ. ಕೆಲವೆಡೆ ಸಾಮಾನ್ಯ ತುಂತುರು ಮಳೆಯಾಗಬಹುದು. ಗರಿಷ್ಠ ತಾಪಮಾನ 29-30 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಭಾರೀ ಮಳೆಯ ಮುನ್ಸೂಚನೆ ಸದ್ಯಕ್ಕೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಮಳೆ:
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಗುಜರಾತ್ ಭಾಗದಲ್ಲಿ ಸ್ಟ್ರಾಫ್ ಸೃಷ್ಟಿಯಾಗಿದ್ದು, ಒಡಿಶಾ ಮತ್ತು ಮಧ್ಯಪ್ರದೇಶದಲ್ಲಿ ಚಂಡಮಾರುತದ ಪರಿಚಲನೆ ತೀವ್ರಗೊಂಡಿದೆ. ಇದು ಮತ್ತಷ್ಟು ತೀವ್ರವಾದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗಬಹುದು. ಆದರೆ, ಸದ್ಯಕ್ಕೆ ಕರ್ನಾಟಕದ 27 ಜಿಲ್ಲೆಗಳಲ್ಲಿ ಹಗುರದಿಂದ ಸಾಮಾನ್ಯ ಮಳೆಯಾಗುವ ಲಕ್ಷಣಗಳಿವೆ. ಭಾರೀ ಮಳೆಯ ಜಿಲ್ಲೆಗಳನ್ನು ಹೊರತುಪಡಿಸಿ, ಯಾವುದೇ ಗಂಭೀರ ಸ್ವರೂಪದ ಚಂಡಮಾರುತದ ಲಕ್ಷಣಗಳಿಲ್ಲ.