ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ, ಆವಿಷ್ಕಾರಕ್ಕೆ ಕರ್ನಾಟಕದ ಜೊತೆ ಕೈಜೋಡಿಸಿ: ಸಚಿವ N.S ಭೋಸರಾಜು

Untitled design (34)

ಜಿನೆವಾ/ಬೆಂಗಳೂರು ಅಕ್ಟೋಬರ್‌ 13: 2035 ರ ವೇಳೆಗೆ ರಾಜ್ಯವನ್ನು 20 ಶತಕೋಟಿ ಡಾಲರ್ ಕ್ವಾಂಟಮ್ ಆರ್ಥಿಕ ರಾಜ್ಯವಾಗಿ ಅಭಿವೃದ್ಧಿಪಡಿಸಲು ದಿಟ್ಟ ಹೆಜ್ಜೆಗಳನ್ನು ಕರ್ನಾಟಕ ಸರ್ಕಾರ ಇಟ್ಟಿದೆ. ಬೆಂಗಳೂರು ನಗರದಲ್ಲಿ ಕ್ಯೂ-ಸಿಟಿ (Q- ಕ್ವಾಂಟಮ್‌ ಸಿಟಿ) ಸ್ಥಾಪಿಸಲು ಅಗತ್ಯ ಭೂಮಿಯನ್ನು ನಿಗದಿಪಡಿಸಲಾಗಿದೆ. ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಫುಲ ಅವಕಾಶಗಳಿದ್ದು, ಸಹಭಾಗಿತ್ವದ ಸಂಶೋಧನೆಗೆ ಕರ್ನಾಟಕ ರಾಜ್ಯ ಸರ್ಕಾರದ ಜೊತೆ ಕೈಜೋಡಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ಅವರು ಕರೆ ನೀಡಿದರು.

ಇಂದು ಸ್ವಿಟ್ಜರ್ಲೆಂಡ್‌ನ ಜಿನೆವಾದ ಬಯೋಟೆಕ್‌ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ “ಸ್ವಿಸ್‌ನೆಕ್ಸ್‌ ಕ್ವಾಂಟಮ್‌ ಸಮಿಟ್‌ 2025” ನಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಯಲ್ಲಿ ರಾಜ್ಯ ಸರ್ಕಾರ ಇಟ್ಟಿರುವಂತಹ ದಿಟ್ಟ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಭಾರತ ಸರ್ಕಾರವು ಸುಮಾರು 6,000 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಆರಂಭಿಸಿದೆ. ಈ ಮಿಷನ್ ನಾವೀನ್ಯತೆ, ಕೌಶಲ್ಯ ಮತ್ತು ಸ್ಟಾರ್ಟ್-ಅಪ್ ಬೆಂಬಲದ ಮೂಲಕ 50 ರಿಂದ 1000 ಕ್ಯೂ ಬಿಟ್‌ ಕ್ವಾಂಟಮ್ ಕಂಪ್ಯೂಟರ್‌ಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಕ್ವಾಂಟಮ್ ಸಂವಹನ ಜಾಲಗಳನ್ನು ನಿರ್ಮಿಸುವುದು ಮತ್ತು ಕಂಪ್ಯೂಟಿಂಗ್, ಸಂವಹನ, ಸಂವೇದನೆ ಮತ್ತು ಸಾಮಗ್ರಿಗಳಿಗಾಗಿ ರಾಷ್ಟ್ರೀಯ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯವು ಈ ರಾಷ್ಟ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿರುವ ಪ್ರಮುಖ ರಾಜ್ಯವಾಗಿ ಹೊರ ಹೊಮ್ಮಿದೆ ಎಂದರು.

ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆ(IISc) ಯಲ್ಲಿ ಈಗಾಗಲೇ ಕ್ವಾಂಟಮ್ ರಿಸರ್ಚ್‌ ಪಾರ್ಕನ್ನು ಸ್ಥಾಪಿಸಿದ್ದು ಕರ್ನಾಟಕ ಸರ್ಕಾರ ಅಗತ್ಯ ಅನುದಾನ ನೀಡಿದೆ. ಮೂಲಕ ಈ ತಂತ್ರಜ್ಞಾನಕ್ಕೆ ಈಗಾಗಲೇ ಮಹತ್ವದ ಬದ್ಧತೆಯನ್ನು ತೋರಿದೆ. ಈ ಸೌಲಭ್ಯವು 55ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು ಮತ್ತು 13 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಿದೆ. ವಾರ್ಷಿಕ 1,000ಕ್ಕೂ ಹೆಚ್ಚು ಕ್ವಾಂಟಮ್ ತಜ್ಞರಿಗೆ ತರಬೇತಿ ನೀಡುತ್ತಿದೆ. ದೀರ್ಘಾವಧಿಯಲ್ಲಿ ಇದನ್ನು ಮುಂದುವರಿಸಲು ನಮ್ಮ ಸರ್ಕಾರವು 48 ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸಿದೆ.

ಜುಲೈ 31 ಹಾಗೂ ಆಗಸ್ಟ್‌ 1, 2025 ರಂದು ಎರಡು ದಿನಗಳ ಕಾಲ ಭಾರತದೇಶದ ಮೊದಲ ಕ್ವಾಂಟಮ್‌ ಇಂಡಿಯಾ ಶೃಂಗಸಭೆಯನ್ನು ಬೆಂಗಳೂರು ನಗರದಲ್ಲಿ ಆಯೋಜಿಸಲಾಯಿತು. ಕ್ವಾಂಟಮ್‌ ಇಂಡಿಯಾ ಸಮಿಟ್‌, ಇಬ್ಬರು ನೋಬೆಲ್‌ ಪ್ರಶಸ್ತಿ ಪುರಸ್ಕೃರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಸಂಶೋಧಕರು, ಹಾಗೂ ಕ್ವಾಂಟಮ್‌ ಕ್ಷೇತ್ರದ ಉದ್ಯಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ಆ ಸಮ್ಮೇಳನದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ಕ್ವಾಂಟಮ್‌ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿರಿಸುವ ಘೋಷಣೆಯನ್ನು ಮಾಡಿದ್ದಾರೆ. ಸಮಾವೇಶದಲ್ಲಿ ನೀಡಿದ್ದ ಭರವಸೆಯಂತೆ ಕ್ಯೂ-ಸಿಟಿ ನಿರ್ಮಾಣಕ್ಕೆ ಅಗತ್ಯವಿರುವಂತಹ ಭೂಮಿಯನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

ಪ್ರತಿವರ್ಷ ಸುಮಾರು 90 ಸಾವಿರಕ್ಕೂ ಹೆಚ್ಚು ಕ್ವಾಂಟಮ್‌ ಇಂಜಿನೀಯರ್‌ಗಳನ್ನು ತಯಾರಿಸುವ ಮೂಲಕ ವಿಶ್ವದಲ್ಲೇ ಅತ್ಯತ್ತಮ ಮಾನವ ಸಂಫನ್ಮೂಲ ಹೊಂದಿರುವ ದೇಶವಾಗಿದೆ. ಸಂಶೋಧನೆ ಹಾಗೂ ಆವಿಷ್ಕಾರದಲ್ಲಿ ಭಾರತ ದೇಶ ವಿಶ್ವ ಭೂಫಟದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನ ಹೊಂದಿದೆ. ಕರ್ನಾಟಕ ರಾಜ್ಯ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ರೋಡ ಮ್ಯಾಪ್‌ ಸಿದ್ದಪಡಿಸಿಕೊಂಡಿದೆ. ಸಿಲಿಕಾನ್‌ ವ್ಯಾಲಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ನಗರದಲ್ಲಿ ಕ್ವಾಂಟಮ್‌ ಕ್ಷೇತ್ರದಲ್ಲಿ ಸಹಭಾಗಿತ್ವ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ವಿಫುಲ ಅವಕಾಶಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಸರ್ಕಾರ ಈ ಕ್ಷೇತ್ರಗಳಲ್ಲಿ ಕೈಜೋಡಿಸಲು ಮುಂದಾಗುವರಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ ಎಂದು ಕರೆ ನೀಡಿದರು.

ಶೃಂಗಸಭೆಯ ಸಂದರ್ಭದಲ್ಲಿ, ಸಚಿವ ಎನ್.ಎಸ್. ಬೋಸರಾಜು ಅವರು “ಕ್ಯೂ-ಸಿಟಿ – ಫೇಸ್ ಒನ್” ನ ಪರಿಕಲ್ಪನೆಯ ವೀಡಿಯೊವನ್ನು ಅನಾವರಣಗೊಳಿಸಿದರು, ಇದು ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಲಿರುವ ಕ್ವಾಂಟಮ್ ತಂತ್ರಜ್ಞಾನ ಕ್ಯಾಂಪಸ್‌ನ ಮೊದಲ ನೋಟವನ್ನು ನೀಡುತ್ತದೆ. ಪ್ರಸ್ತಾವಿತ ಕ್ಯೂ-ಸಿಟಿ ಹಾರ್ಡ್‌ವೇರ್ ಉತ್ಪಾದನಾ ಘಟಕಗಳು, ಸುಧಾರಿತ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು, ಇನ್‌ಕ್ಯುಬೇಶನ್ ಕೇಂದ್ರಗಳು ಮತ್ತು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಕ್ವಾಂಟಮ್ ನಾವೀನ್ಯತೆಯನ್ನು ಅಭಿವೃದ್ದಿಗೊಳಿಸಲು ವಿನ್ಯಾಸಗೊಳಿಸಲಾದ ಸಹಯೋಗದ ಕಾರ್ಯಕ್ಷೇತ್ರಗಳನ್ನು ಸಂಯೋಜಿಸುತ್ತದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಐಎಎಸ್‌. ಭಾರತೀಯ ವಿಜ್ಞಾನ ಸಂಸ್ಥೆ (IISc) ಕ್ವಾಂಟಮ್ ರಿಸರ್ಚ್‌ ಪಾರ್ಕನ ಅಧ್ಯಕ್ಷರಾದ ಪ್ರೊ. ಅರಿಂದಮ್‌ ಘೋಷ್‌, ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಆಪ್ತ ಕಾರ್ಯದರ್ಶಿಗಳಾದ ವೀರಭದ್ರ ಹಂಚಿನಾಳ್‌ ಅವರನ್ನೊಳಗೊಂಡ ಅಧಿಕಾರಿಗಳ ತಂಡ ಸಮಾವೇಶದಲ್ಲಿ ಭಾಗವಹಿದೆ.

Exit mobile version