ಬೆಂಗಳೂರು: ಸಾರ್ವಜನಿಕರ ಜೀವ ಮತ್ತು ಆಸ್ತಿಪಾಸ್ತಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ರಾಜ್ಯದಲ್ಲಿ ಆತಂಕಕಾರಿ ಬೆಳವಣಿಗೆಯಾಗಿ ಮಾರ್ಪಟ್ಟಿದೆ. ರಕ್ಷಕನೇ ಭಕ್ಷಕನಾದಂತೆ ವರ್ತಿಸುತ್ತಿರುವ ಕೆಲವು ಸಿಬ್ಬಂದಿಗಳ ಕೃತ್ಯದಿಂದ ಇಡೀ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಗೃಹ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಪೊಲೀಸರ ವಿರುದ್ಧವೇ 340 ಅಪರಾಧ ಪ್ರಕರಣಗಳು ದಾಖಲಾಗಿವೆ.
ಇಲಾಖೆಯನ್ನು ಬೆಚ್ಚಿಬೀಳಿಸಿದ ಪ್ರಮುಖ ಘಟನೆಗಳು
ಪೊಲೀಸ್ ಇಲಾಖೆಯ ಘನತೆಯನ್ನು ಮಣ್ಣುಪಾಲು ಮಾಡಿದ ಕೆಲವು ಪ್ರಮುಖ ಪ್ರಕರಣಗಳು ಇಲ್ಲಿವೆ:
-
ಕೋಟಿ ಕೋಟಿ ದರೋಡೆ: ಬೆಂಗಳೂರಿನ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಎಂಬಾತ ದರೋಡೆಕೋರರ ತಂಡದೊಂದಿಗೆ ಶಾಮೀಲಾಗಿ ₹7 ಕೋಟಿ ಮೌಲ್ಯದ ನಗದು ಲೂಟಿ ಮಾಡಲು ಒಳಸಂಚು ರೂಪಿಸಿದ್ದನು. ನಗದು ನಿರ್ವಹಣಾ ಸಂಸ್ಥೆಯ ಮಾಜಿ ಸಿಬ್ಬಂದಿಯೊಂದಿಗೆ ಸೇರಿ ನಡೆಸಿದ ಈ ಹೈಟೆಕ್ ದರೋಡೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
-
ನಕಲಿ ಗನ್ ತೋರಿಸಿ ಲೂಟಿ: ದಾವಣಗೆರೆಯಲ್ಲಿ ಇಬ್ಬರು ಪಿಎಸ್‌ಐ (PSI) ದರ್ಜೆಯ ಅಧಿಕಾರಿಗಳೇ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ, ತಾವು ‘ಐಜಿ ಸ್ಕ್ವಾಡ್’ ಅಧಿಕಾರಿಗಳೆಂದು ಸುಳ್ಳು ಹೇಳಿ, ನಕಲಿ ಬಂದೂಕಿನಿಂದ ಬೆದರಿಸಿ 80 ಗ್ರಾಂ ಚಿನ್ನ ದೋಚಿದ್ದರು.
-
ಅಪಹರಣ ಮತ್ತು ಸುಲಿಗೆ: ಮಾಲೂರಿನ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಬಿಪಿಒ ಸಂಸ್ಥೆಯ ಮ್ಯಾನೇಜರ್‌ನ ಅಪಹರಣ ಮತ್ತು ಹಣದ ಸುಲಿಗೆಗೆ ಯತ್ನಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಅಂಕಿ-ಅಂಶ
ರಾಜ್ಯದ ರಾಜಧಾನಿ ಬೆಂಗಳೂರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಮುಖ ಜಿಲ್ಲೆಗಳ ವಿವರ ಹೀಗಿದೆ:
-
ಬೆಂಗಳೂರು ನಗರ: 101 ಪ್ರಕರಣಗಳು
-
ದಾವಣಗೆರೆ: 18 ಪ್ರಕರಣಗಳು
-
ರಾಯಚೂರು: 16 ಪ್ರಕರಣಗಳು
-
ಹಾಸನ: 14 ಪ್ರಕರಣಗಳು
-
ಬೆಳಗಾವಿ & ವಿಜಯನಗರ: ತಲಾ 12 ಪ್ರಕರಣಗಳು
-
ಮಂಡ್ಯ: 11 ಪ್ರಕರಣಗಳು
ಒಂದೇ ಸ್ಥಳದಲ್ಲಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸುವುದು, ಕೆಟ್ಟ ಸಹವಾಸ, ಅತಿ ವಿಶ್ವಾಸ ಮತ್ತು ವೈಯಕ್ತಿಕ ಲಾಭದ ದುರಾಸೆಯೇ ಇಂತಹ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣ ಎಂದು ಗೃಹ ಇಲಾಖೆ ವಿಶ್ಲೇಷಿಸಿದೆ. ಪೊಲೀಸ್ ಇಲಾಖೆಯಲ್ಲಿದ್ದರೂ ನೈತಿಕ ಲೋಪದೋಷಗಳಿಂದಾಗಿ ಕೆಲವು ಸಿಬ್ಬಂದಿಗಳು ಕ್ರಿಮಿನಲ್‌ಗಳಂತೆ ವರ್ತಿಸುತ್ತಿದ್ದಾರೆ.
ಇಲಾಖೆಯ ಬಿಗಿ ಕ್ರಮಗಳು
ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಅಧಿಕಾರಿಗಳು, ಭ್ರಷ್ಟ ಸಿಬ್ಬಂದಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಜರುಗಿಸಲು ಮುಂದಾಗಿದ್ದಾರೆ. ಒಂದೇ ಕಡೆ ಅತಿ ಹೆಚ್ಚು ಕಾಲ ಉಳಿದಿರುವ ಸಿಬ್ಬಂದಿಗಳ ವರ್ಗಾವಣೆ ಮಾಡುವುದು, ಸಿಬ್ಬಂದಿಗಳ ಪೂರ್ವಾಪರ ಮತ್ತು ನಡತೆಯ ಬಗ್ಗೆ ನಿಯತವಾಗಿ ಮೌಲ್ಯಮಾಪನ ಮಾಡುವುದು ಹಾಗೂ ಕರ್ತವ್ಯ ಲೋಪವೆಸಗುವ ಅಥವಾ ಅಪರಾಧಿಗಳನ್ನು ಪೋಷಿಸುವ ಘಟಕಾಧಿಕಾರಿಗಳ ವಿರುದ್ಧವೇ ಕ್ರಮ ಕೈಗೊಳ್ಳುವುದು ಸೇರಿದಂತೆ ಇತರೆ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗುತ್ತಿದೆ.
