ದಾವಣಗೆರೆ: ವೃದ್ಧಾಪ್ಯದಲ್ಲಿ ಆಸರೆಯಾಗಬೇಕಿದ್ದ ಮಗನೇ ಹೆತ್ತ ತಾಯಿಯ ಪಾಲಿಗೆ ಯಮನಾಗಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ಮದ್ಯ ಸೇವಿಸಲು ಹಣ ನೀಡಲು ನಿರಾಕರಿಸಿದ ಕಾರಣಕ್ಕೆ 70 ವರ್ಷದ ತಾಯಿ ಬುಳ್ಳಮ್ಮ ಅವರನ್ನು ಮಗ ಹನುಮಂತಪ್ಪ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಸ್ನೇಹಿತನ ಕೊಲೆ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಮಗನನ್ನು ಜಾಮೀನಿನ ಮೇಲೆ ಬಿಡಿಸಿಕೊಳ್ಳಲು ತಾಯಿ ತನ್ನ ಮನೆಯನ್ನು ಮಾರಿದ್ದರು. ಆದರೆ, ಜೈಲಿನಿಂದ ಹೊರಬಂದ ಕೇವಲ ಮೂರು ತಿಂಗಳಲ್ಲೇ ಅದೇ ಮಗನಿಂದ ತಾಯಿ ಕೊನೆಯುಸಿರೆಳೆದಿದ್ದಾರೆ.
ಮೃತ ಬುಳ್ಳಮ್ಮ ಅವರಿಗೆ ಹತ್ತು ಮಕ್ಕಳು. ಒಂಬತ್ತು ಹೆಣ್ಣು ಮಕ್ಕಳ ಬಳಿಕ ಜನಿಸಿದ ಒಬ್ಬನೇ ಗಂಡು ಮಗ ಹನುಮಂತಪ್ಪ (35). ಗಂಡನನ್ನು ಕಳೆದುಕೊಂಡ ಬಳಿಕ ಕಷ್ಟಪಟ್ಟು ಮಕ್ಕಳನ್ನು ಬೆಳೆಸಿದ್ದ ಬುಳ್ಳಮ್ಮ, ಒಂಬತ್ತು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದರು. ಗಂಡು ಮಗನ ಮೇಲಿದ್ದ ಅಪಾರ ಪ್ರೀತಿಯಿಂದ ಆತನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ, ಹನುಮಂತಪ್ಪ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ನೆಮ್ಮದಿ ಇರಲಿಲ್ಲ ಎನ್ನಲಾಗಿದೆ.
ಈ ಹಿಂದೆ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಹನುಮಂತಪ್ಪ ಏಳು ವರ್ಷಗಳ ಕಾಲ ಜೈಲಿನಲ್ಲಿದ್ದ. ಮಗ ಜೈಲು ಸೇರಿದ್ದರಿಂದ ತಾಯಿ ಬುಳ್ಳಮ್ಮ ತೀವ್ರವಾಗಿ ನೊಂದಿದ್ದರು. ಮಗನನ್ನು ಜೈಲಿನಿಂದ ಹೊರತರಲು ಮನೆಯನ್ನೇ ಮಾರಾಟ ಮಾಡಿ, ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ಜಾಮೀನಿನ ಮೇಲೆ ಬಿಡಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಮೂರು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಹನುಮಂತಪ್ಪ, ದಾವಣಗೆರೆಯ ಖಾಸಗಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ.
ತಾಯಿಯ ಬಳಿ ಹಣ ಕೇಳಿ ಜಗಳ
ಬುಳ್ಳಮ್ಮ ಅವರು ತಮ್ಮ ಹೆಣ್ಣುಮಕ್ಕಳ ಮನೆಗಳಲ್ಲಿ ವಾಸವಾಗಿದ್ದರು. ಮಗನನ್ನು ನೋಡಬೇಕೆಂಬ ಆಸೆಯಿಂದ ಎರಡು ದಿನಗಳ ಹಿಂದೆ ಹನುಮಂತಪ್ಪನನ್ನು ದೊಡ್ಡಘಟ್ಟ ಗ್ರಾಮಕ್ಕೆ ಕರೆಸಿಕೊಂಡಿದ್ದರು. ಘಟನೆ ನಡೆದ ದಿನ ಅಕ್ಕ ಶಾರದಮ್ಮ ಅವರ ಮನೆಯಲ್ಲಿ ಚಿಕನ್ ಊಟ ಮಾಡಿದ ಹನುಮಂತಪ್ಪ, ತಾಯಿಯೊಂದಿಗೆ ಮಾತನಾಡಿಕೊಂಡು ಬರುವುದಾಗಿ ಹೇಳಿ ತೆರಳಿದ್ದ.
ಈ ವೇಳೆ ಬುಳ್ಳಮ್ಮ ಅವರ ಬಳಿ ಇತ್ತೀಚೆಗೆ ಬಿಡಿಸಿಕೊಂಡಿದ್ದ ಸುಮಾರು 6 ಸಾವಿರ ರೂಪಾಯಿ ಹಣವಿರುವ ವಿಚಾರ ಹನುಮಂತಪ್ಪನಿಗೆ ತಿಳಿದಿತ್ತು ಎನ್ನಲಾಗಿದೆ. ವಿಪರೀತ ಮದ್ಯಪಾನ ಮಾಡಿದ್ದ ಆತ, ತಾಯಿಯ ಬಳಿ ಹಣ ಕೇಳಿದ್ದಾನೆ. ಆದರೆ, ಕುಡಿತಕ್ಕೆ ಹಣ ಖರ್ಚು ಮಾಡುತ್ತಾನೆ ಎಂಬ ಕಾರಣಕ್ಕೆ ಬುಳ್ಳಮ್ಮ ಹಣ ನೀಡಲು ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ತಾಯಿ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಕೋಪಗೊಂಡ ಹನುಮಂತಪ್ಪ ಕಟ್ಟಿಗೆಯ ತುಂಡಿನಿಂದ ತಾಯಿ ಬುಳ್ಳಮ್ಮ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಬುಳ್ಳಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಬೆಡ್ಶೀಟ್ನಿಂದ ಮುಚ್ಚಿ ಆರೋಪಿ ಅಲ್ಲಿಯೇ ಕುಳಿತಿದ್ದ ಎನ್ನಲಾಗಿದೆ.
ಮಗಳ ಕಣ್ಣಿಗೆ ಬಿದ್ದ ಭೀಕರ ದೃಶ್ಯ
ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ತೆರಳಿದ್ದ ಹನುಮಂತಪ್ಪ ಮರಳಿ ಬಾರದಿದ್ದರಿಂದ ಅಕ್ಕ ಶಾರದಮ್ಮ ಅನುಮಾನಗೊಂಡು ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಗ್ರಾಮಸ್ಥರನ್ನು ಕರೆಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಬಸವಾಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
