ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘5 ವರ್ಷ ನಾನೇ ಸಿಎಂ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಬಹುದೆಂಬ ಭಯದಿಂದಲೇ ಅಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವರ 2013ರ ಹೇಳಿಕೆಯನ್ನ ಮಾತನಾಡುತ್ತಾ.. 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಇದು ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಮನುಷ್ಯನಿಗೆ ನಾಲಿಗೆ ಒಂದೇ ಇರಬೇಕು. ಹೇಳೋದೊಂದು ಮಾಡೋದೊಂದು ಆದ್ರೆ ಯಾರು ಏನು ಮಾಡಲಾಗುತ್ತೆ? ಎಂದು ಪ್ರಶ್ನಿಸಿದರು.
ಭೀಮಾ ನದಿ ಪ್ರವಾಹದಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಪರಿಸ್ಥಿತಿ ನಿರ್ವಹಣೆಯ ಬಗ್ಗೆಯೂ ನಾರಾಯಣಸ್ವಾಮಿ ಅವರು ತೀವ್ರ ಟೀಕೆ ಮಾಡಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ನೇರ ಭೇಟಿ ನೀಡಿದ್ದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತಿತ್ತು. ಸಂಕಷ್ಟ ಬಂದಾಗ ತಪ್ಪಿಸಿಕೊಳ್ಳುವ ಕಲೆ ಸಿದ್ದರಾಮಯ್ಯಗೆ ಗೊತ್ತಿದೆ… ರಸ್ತೆಗುಂಡಿಗಳಿಂದಾಗಿ ಅವರು ಕಾರಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾರಾಯಣಸ್ವಾಮಿ ಅವರು, ಸರ್ಕಾರವು ಪರಿಹಾರ ಕೊಡುವ ಬದಲು ಕೇಂದ್ರ ಸರ್ಕಾರದ ತೀರ್ಮಾನವನ್ನು ಎದುರುನೋಡುತ್ತಿದೆ ಎಂದು, ಪರಿಹಾರ ಕೊಡಿ ಅಂದ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ, ತೀರ್ಮಾನ ಬರಬೇಕು ಎಂದು ಸಿಎಂ ಹೇಳ್ತಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು.





