ನನ್ನ ಹ*ತ್ಯೆಗೆ ಸುಪಾರಿ : ಡಿಜಿ & ಐಜಿಪಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ ಪುತ್ರ

114 (2)

ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿರುವಾಗಲೇ, ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ, ಎಂಎಲ್​ಸಿ ರಾಜೇಂದ್ರ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿಲ್ಲ, ಬದಲಿಗೆ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನ ಡಿಜಿ, ಐಜಿಪಿ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.

ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ: ರಾಜೇಂದ್ರ

ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಎಂಎಲ್​ಸಿ ರಾಜೇಂದ್ರ, “ನಾನು ಡಿಜಿಪಿ ಅವರನ್ನು ಭೇಟಿ ಮಾಡಿದ್ದೇನೆ. ನನ್ನ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನನಗೆ ಕರೆಗಳು ಬರುತ್ತಿದ್ದವು. ಆದರೆ, ಖಚಿತ ಮಾಹಿತಿ ಬಂದ ಮೇಲೆ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದು ದೂರು ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.

ಮನೆಯಲ್ಲೇ ಹತ್ಯೆಗೆ ಯತ್ನ

ನವೆಂಬರ್ 16ರಂದು ರಾಜೇಂದ್ರ ಅವರ ಮಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಮನೆಯಲ್ಲಿ ಶಾಮೀಯಾನ ಹಾಕಲು ಕೆಲವರು ಬಂದಿದ್ದರು. ಆದರೆ, ಇವರ ಉದ್ದೇಶ ಬೇರೆದ್ದಾಗಿದೆ ಎಂದು ರಾಜೇಂದ್ರ ಶಂಕೆ ವ್ಯಕ್ತಪಡಿಸಿದ್ದಾರೆ. “ಆ ದಿನ ಮನೆಗೆ ಬಂದವರು ನನ್ನ ಮೇಲೆ ಹತ್ಯೆಗೆ ಯತ್ನಸಲು ಬಂದಿದ್ದರು. ಇದು ಪೂರ್ತಿ ಪ್ಲಾನ್ ಮಾಡಿದ್ದರು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಷಯ ಜನವರಿಯಲ್ಲಿ ರಾಜೇಂದ್ರ ಅವರಿಗೆ ತಿಳಿದು ಬಂದಿದೆ. ಅವರ ಮೂಲಗಳ ಮೂಲಕ ಕೊಲೆಗೆ ಸುಪಾರಿ ಕೊಟ್ಟಿರುವುದರ ಬಗ್ಗೆ ಮಾಹಿತಿ ದೊರಕಿದಂತೆ, ಒಂದು ವಾಯ್ಸ್ ರೆಕಾರ್ಡ್ ಕೂಡ ಲಭ್ಯವಾಯಿತು. ಈ ಆಡಿಯೋ ಕ್ಲಿಪ್‌ನಲ್ಲಿ 5 ಲಕ್ಷ ರೂಪಾಯಿ ಹಣ ನೀಡಿ ನನ್ನ ಹತ್ಯೆಗೆ ತಯಾರಿ ನಡೆಸಲಾಗಿದೆ ಎಂಬ ಮಾತುಕತೆ ನಡೆದಿದೆ. “ನನ್ನ ಕೊಲೆಗೆ ಪ್ಲಾನ್ ಮಾಡಿರುವುದು ಬಹಿರಂಗವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು” ಎಂದು ತಿಳಿಸಿದರು. 

ರಾಜೇಂದ್ರ ಈ ಕುರಿತು ಡಿಜಿಪಿ ಅವರಿಗೂ ಮಾಹಿತಿ ನೀಡಿದ್ದಾರೆ. “ನಿಮ್ಮ ವ್ಯಾಪ್ತಿಯಲ್ಲಿರುವ ಪ್ರಕರಣ ಎಂದು ಡಿಜಿಪಿ ಹೇಳಿದ್ದಾರೆ. ಬಹುಶಃ ತುಮಕೂರು ಎಸ್.ಪಿಗೆ ವಿಷಯ ತಿಳಿಸುತ್ತಾರೆ. ಅಲ್ಲಿಯೇ ತನಿಖೆ ನಡೆಸಲಾಗುತ್ತದೆ” ಎಂದು ರಾಜೇಂದ್ರ ತಿಳಿಸಿದರು.

“ನಾನು ಹನಿಟ್ರ್ಯಾಪ್ ಕುರಿತಾಗಿ ದೂರು ನೀಡಿಲ್ಲ. ನನ್ನ ಹತ್ಯೆಗೆ ಸುಪಾರಿ ಕೊಟ್ಟಿದ್ದಾರೆ ಎಂಬ ಬಗ್ಗೆ ದೂರು ನೀಡಿದ್ದೇನೆ. ನಾನು ಮುಂದಿನ ಹಂತವಾಗಿ ತುಮಕೂರು ಎಸ್.ಪಿ ಕಚೇರಿಗೂ ಭೇಟಿ ನೀಡಲಿದ್ದೇನೆ” ಎಂದು ಹೇಳಿದರು.

Exit mobile version