ಬೆಂಗಳೂರು: ಕರ್ನಾಟಕ ಸರ್ಕಾರದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ರಾಜೀನಾಮೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಗೀಕಾರ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪತ್ರವನ್ನು ಪಡೆದ ನಂತರ, ರಾಜ್ಯಪಾಲರು ಅದನ್ನು ಶುಕ್ರವಾರ ಅಂಗೀಕರಿಸಿದ್ದಾರೆ. ಇದನ್ನು ಶೀಘ್ರವೇ ಗೆಜೆಟ್‌ನಲ್ಲಿ ಅಧಿಸೂಚಿಸಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಹೈಕಮಾಂಡ್ ಒತ್ತಡದ ಹಿನ್ನೆಲೆ
ಕೆ.ಎನ್ ರಾಜಣ್ಣಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ನಿಂದ ಸೂಚನೆ ನೀಡಲಾಗಿತ್ತು. ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎನ್ ರಾಜಣ್ಣ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಲಾಗಿದೆ ಎನ್ನಲಾಗುತ್ತಿದೆ.
ವಿಧಾನಸೌಧದಲ್ಲಿ ಪ್ರತಿಧ್ವನಿ
ರಾಜಣ್ಣ ಅವರ ರಾಜೀನಾಮೆ ವಿಧಾನಸಭೆಯ ಕಲಾಪದಲ್ಲೂ ಪ್ರತಿಧ್ವನಿಸಿತ್ತು. ಬಿಜೆಪಿ ನಾಯಕ ಆರ್.ಅಶೋಕ್, “ರಾಜೀನಾಮೆ ನೀಡಿದ್ದಾರೆಂದು ಹೇಳಲಾಗುತ್ತಿದೆ. ಸರ್ಕಾರವೇ ಸ್ಪಷ್ಟವಾಗಿ ಹೇಳಬೇಕು” ಎಂದು ಕೇಳಿದರು. ಬಿಜೆಪಿ ಸದಸ್ಯ ಸುನೀಲ್ ಕುಮಾರ್, “ದಲಿತ ಸಚಿವರಿಗೆ ಅನ್ಯಾಯ ಮಾಡಬೇಡಿ” ಎಂದು ಆಗ್ರಹಿಸಿದರು. ಈ ಸಮಯದಲ್ಲಿ ರಾಜಣ್ಣ ಮೌನವಾಗಿದ್ದರು.
ರಾಜಣ್ಣ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. ಸಿಎಂ ಅದನ್ನು ರಾಜ್ಯಪಾಲರಿಗೆ ರವಾನಿಸಿದ್ದರು. ರಾಜ್ಯಪಾಲರು ಅದನ್ನು ಅಂಗೀಕರಿಸಿದ್ದಾರೆ. ಸಚಿವಾಲಯದ ಮೂಲಗಳು, “48 ಗಂಟೆಗಳೊಳಗೆ ಗೆಜೆಟ್ ಪ್ರಕಟವಾಗಬಹುದು” ಎಂದು ತಿಳಿಸಿವೆ.