ರಾಜ್ಯದ ಜನರಿಗೆ ಮತ್ತೆ ಮಿಲ್ಕ್ ಶಾಕ್: ಹಾಲಿನ ದರ ಏರಿಕೆ

Untitled design 2025 03 27t142337.493

ಬೆಂಗಳೂರು: ಬಸ್ ಹಾಗೂ ಮೆಟ್ರೋ ದರ ಏರಿಕೆಯ ಬಳಿಕ, ರಾಜ್ಯದಲ್ಲಿ ಹಾಲಿನ ದರ ಹೆಚ್ಚಳವಾಗಿದ್ದು, ಜನತೆಗೆ ಮತ್ತೊಂದು ಶಾಕ್ ನೀಡಿದೆ. ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಈ ದರ ಹೆಚ್ಚಳದಿಂದ ಭಾರೀ ಆಘಾತ ಉಂಟುಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು (ಮಾರ್ಚ್ 27) ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4 ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ನಾಳೆಯಿಂದಲೇ (ಮಾರ್ಚ್ 28) ಪರಿಷ್ಕೃತ ದರ ಜಾರಿಗೆ ಬರಲಿದೆ.

ಯಾವ ಹಾಲಿನ ದರ ಎಷ್ಟಾಗಬಹುದು?

– ನೀಲಿ‌ ಪ್ಯಾಕೆಟ್ ಹಾಲು – 44 ರೂ ನಿಂದ 48 ರೂ
– ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58 ರೂ.
– ಸಮೃದ್ಧಿ ಹಾಲಿನ‌ ಪ್ಯಾಕೆಟ್ 56 ರೂ. ನಿಂದ 60 ರೂ.
– ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ.
– ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ.

ಹಾಲಿನ ದರವನ್ನು ₹6-₹8 ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಪ್ರಸ್ತಾವಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಈ ಮೊತ್ತಕ್ಕೆ ಒಪ್ಪದೆ, ಹೆಚ್ಚುವರಿ ಹಣವು ಸಂಪೂರ್ಣವಾಗಿ ಹಾಲು ಉತ್ಪಾದಕರಿಗೆ ಮಾತ್ರ ಸಿಗಬೇಕು ಎಂದು ತಿಳಿಸಿದ್ದರು.

ಸೋಮವಾರ ನಡೆದ ಸಭೆಯಲ್ಲಿ ಅವರು ₹5 ಹೆಚ್ಚಳ ಮಾಡಬಹುದು, ಅದರಲ್ಲಿ ₹3 ರೈತರಿಗೆ ಹಾಗೂ ₹2 ಹಾಲು ಒಕ್ಕೂಟಗಳಿಗೆ ವಹಿಸಬಹುದು ಎಂದು ಸಲಹೆ ನೀಡಿದ್ದರು. ಆದರೆ ಇಂದು ನಡೆದ ಸಂಪುಟ ಸಭೆಯಲ್ಲಿ ದರ ಹೆಚ್ಚಳವನ್ನು ₹4 ಕ್ಕೆ ಮಾತ್ರ ಸೀಮಿತಗೊಳಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.

ಈ ಹಾಲಿನ ದರ ಹೆಚ್ಚಳ ರಾಜ್ಯದ ಹತ್ತು ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರಿಗೆ ನೆರವಾಗಲಿದೆ. ಆದರೆ ಈ ನಿರ್ಧಾರವು ಸಾಮಾನ್ಯ ಜನತೆ ಹಾಗೂ ಮಧ್ಯಮ ವರ್ಗದವರಿಗೆ ಆರ್ಥಿಕ ಒತ್ತಡವನ್ನುಂಟುಮಾಡುವ ಸಾಧ್ಯತೆ ಇದೆ.

Exit mobile version