ಬೆಂಗಳೂರು (ಜ.29): ರಾಜ್ಯ ಸರ್ಕಾರದ ಅಧಿಕಾರಿಗಳು ಹಾಗೂ ನೌಕರರಲ್ಲಿ ಸ್ವದೇಶಿ ಪ್ರೇಮವನ್ನು ಬೆಳೆಸುವ ಹಾಗೂ ಖಾದಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಸರ್ಕಾರಿ ನೌಕರರು ಕಡ್ಡಾಯವಾಗಿ ಖಾದಿ ಉಡುಪು ಧರಿಸಬೇಕು ಎಂದು ನಿರ್ಧರಿಸಲಾಗಿದೆ. ಈ ನಿಯಮವು ಕೇವಲ ಸರ್ಕಾರದ ಇಲಾಖೆಗಳಿಗೆ ಮಾತ್ರ ಸೀಮಿತವಾಗದೇ, ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರಗಳು ಮತ್ತು ಅನುದಾನಿತ ಸಂಸ್ಥೆಗಳಿಗೂ ಅನ್ವಯವಾಗಲಿದೆ.
ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಜೊತೆಗೆ ಖಾದಿ ಉತ್ಪನ್ನಗಳ ಬಳಕೆಯನ್ನು ಜನಸಾಮಾನ್ಯರಲ್ಲಿ ಜನಪ್ರಿಯಗೊಳಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಇದರ ಮೂಲಕ ಗ್ರಾಮೀಣ ಕೈಗಾರಿಕೆಗಳಿಗೆ ಹೊಸ ಜೀವ ತುಂಬುವ ಜೊತೆಗೆ ಖಾದಿ ಕಾರ್ಮಿಕರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಆಶಯವೂ ಸರ್ಕಾರದ್ದಾಗಿದೆ.
ಖಾದಿ ಖರೀದಿಗೆ ವಿಶೇಷ ರಿಯಾಯಿತಿ
ಸರ್ಕಾರಿ ನೌಕರರು ತಮ್ಮ ಖಾದಿ ಉಡುಪುಗಳನ್ನು ಸರ್ಕಾರಿ ಸ್ವಾಮ್ಯದ ಖಾದಿ ಮತ್ತು ಗ್ರಾಮೋದ್ಯೋಗ ಮಳಿಗೆಗಳಲ್ಲಿಯೇ ಖರೀದಿಸಬೇಕು ಎಂದು ಸೂಚಿಸಲಾಗಿದೆ. ನೌಕರರನ್ನು ಈ ಯೋಜನೆಯತ್ತ ಆಕರ್ಷಿಸಲು, ಖಾದಿ ಗ್ರಾಮೋದ್ಯೋಗ ಮಂಡಳಿ ಈಗಾಗಲೇ ನೀಡುತ್ತಿರುವ ರಿಯಾಯಿತಿಗೆ ಹೆಚ್ಚುವರಿಯಾಗಿ ಶೇ.5ರಷ್ಟು ವಿಶೇಷ ರಿಯಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಗುಣಮಟ್ಟದ ಖಾದಿ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಾಗಲಿದ್ದು, ನೌಕರರ ಮೇಲಿನ ಆರ್ಥಿಕ ಒತ್ತಡವೂ ಕಡಿಮೆಯಾಗಲಿದೆ.
ಈ ಕ್ರಮದಿಂದ ಖಾದಿ ಮಳಿಗೆಗಳ ವ್ಯಾಪಾರ ವಹಿವಾಟು ಹೆಚ್ಚಾಗುವ ನಿರೀಕ್ಷೆಯಿದ್ದು, ಗ್ರಾಮೀಣ ಭಾಗದಲ್ಲಿನ ಕೈಮಗ್ಗ ಹಾಗೂ ಕುಶಲಕರ್ಮಿಗಳಿಗೆ ಸ್ಥಿರ ಆದಾಯ ಸಿಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.
ಪುರುಷರು-ಮಹಿಳೆಯರಿಗೆ ಸ್ಪಷ್ಟ ಡ್ರೆಸ್ ಕೋಡ್
ಸಭೆಯಲ್ಲಿ ಉಡುಪಿನ ವಿನ್ಯಾಸ ಮತ್ತು ಶಿಸ್ತು ಪಾಲನೆಯ ಕುರಿತಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗಿದೆ. ಪುರುಷ ನೌಕರರು ಖಾದಿ ಶರ್ಟ್-ಪ್ಯಾಂಟ್ ಅಥವಾ ಖಾದಿ ಓವರ್ ಕೋಟ್ ಧರಿಸಬೇಕು. ಮಹಿಳಾ ನೌಕರರು ಖಾದಿ ಅಥವಾ ಖಾದಿ ಸಿಲ್ಕ್ ಸೀರೆ ಅಥವಾ ಚೂಡಿದಾರ್ ಧರಿಸುವುದು ಕಡ್ಡಾಯವಾಗಿರಲಿದೆ.
ಈ ಡ್ರೆಸ್ ಕೋಡ್ ಮೂಲಕ ಕಚೇರಿಗಳಲ್ಲಿ ಶಿಸ್ತಿನ, ಸಾಂಪ್ರದಾಯಿಕ ಹಾಗೂ ವೃತ್ತಿಪರ ವಾತಾವರಣ ನಿರ್ಮಿಸುವ ಜೊತೆಗೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಏಪ್ರಿಲ್ 21ರಿಂದ ಅಧಿಕೃತ ಚಾಲನೆ
ಈ ನೂತನ ಯೋಜನೆಯನ್ನು 2026ರ ಏಪ್ರಿಲ್ 21ರಂದು, ಅಂದರೆ ‘ಸರ್ಕಾರಿ ನೌಕರರ ದಿನಾಚರಣೆ’ಯಂದು ಅಧಿಕೃತವಾಗಿ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತಂತೆ ಶೀಘ್ರದಲ್ಲೇ ಅಧಿಕೃತ ಸುತ್ತೋಲೆ ಹೊರಡಿಸಲಾಗುವುದು. ಆದೇಶ ಜಾರಿಯಾದ ಬಳಿಕ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಉಡುಪಿನ ದಿನವಾಗಿ ಆಚರಿಸಲಾಗಲಿದೆ.
ಸೇನಾ ಮಾದರಿಯಲ್ಲಿ ‘ಸರ್ಕಾರಿ ನೌಕರರ ಕ್ಯಾಂಟೀನ್’
ಖಾದಿ ಉಡುಪು ಯೋಜನೆಯ ಜೊತೆಗೆ ಸರ್ಕಾರ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೂ ಕೈ ಹಾಕಿದೆ. ಎಂಎಸ್‌ಐಎಲ್ (MSIL) ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗಾಗಿ ವಿಶೇಷ ‘ಸರ್ಕಾರಿ ನೌಕರರ ಕ್ಯಾಂಟೀನ್’ ಆರಂಭಿಸುವ ಚಿಂತನೆ ನಡೆದಿದೆ. 2026–27ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸುವ ಸಾಧ್ಯತೆ ಹೆಚ್ಚಿದ್ದು, ದಿನಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ನೌಕರರಿಗೆ ಪೂರೈಸುವ ಗುರಿಯಿದೆ.
