ಮದ್ದೂರು ಪಟ್ಟಣ ಸಂಪೂರ್ಣ ಸ್ತಬ್ಧ: ನಗರದಲ್ಲಿ ಪೊಲೀಸರ ಕಟ್ಟೆಚ್ಚರ

Untitled design 2025 09 09t104425.596

ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಘಟನೆಯಿಂದಾಗಿ ಉಂಟಾದ ಉದ್ವಿಗ್ನತೆಯಿಂದಾಗಿ ಇಂದು ಪಟ್ಟಣ ಸಂಪೂರ್ಣ ಬಂದ್ ಆಗಿದೆ. ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಮದ್ದೂರು ಬಂದ್‌ಗೆ ಕರೆ ನೀಡಿದ್ದು, ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೊಲೀಸರು ಮುನ್ನೆಚ್ಚರಿಕೆಯಾಗಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿಗೊಳಿಸಿದ್ದಾರೆ, ಇದು ಸೆಪ್ಟೆಂಬರ್ 10ರ ಬೆಳಗಿನ 6 ಗಂಟೆವರೆಗೆ ಮುಂದುವರಿಯಲಿದೆ.

ಘಟನೆಯ ಹಿನ್ನೆಲೆ

ಗಣೇಶ ಚತುರ್ಥಿಯ ಸಂಭ್ರಮದೊಂದಿಗೆ ಮದ್ದೂರಿನ ಚನ್ನೇಗೌಡ ಬಡಾವಣೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಸೆಪ್ಟೆಂಬರ್ 7ರ ರಾತ್ರಿ ವಿಸರ್ಜನಾ ಮೆರವಣಿಗೆ ನಡೆಯುವ ಸಂದರ್ಭದಲ್ಲಿ, ರಾಮ್ ರಹೀಂ ನಗರದ ಬಳಿ ಮಸೀದಿಯಿಂದ ಸುಮಾರು 500 ಮೀಟರ್ ದೂರದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆ ಹಿನ್ನೆಲೆ ಗಣೇಶ ಭಕ್ತರು ಕೂಡ ಕಲ್ಲು ಎಸೆತದಲ್ಲಿ ತೊಡಗಿದ್ದು, ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಘರ್ಷಣೆಯನ್ನು ತಡೆಯಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಬ್ಬ ವ್ಯಕ್ತಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.

ಬಂದ್ ಮತ್ತು ಪ್ರತಿಭಟನೆ

ಕಲ್ಲು ತೂರಾಟ ಮತ್ತು ಪೊಲೀಸರ ಲಾಠಿಚಾರ್ಜ್‌ನ ಖಂಡನೆಯಾಗಿ ಹಿಂದೂಪರ ಸಂಘಟನೆಗಳು ಸೆಪ್ಟೆಂಬರ್ 8ರಂದು ಪ್ರತಿಭಟನೆ ನಡೆಸಿದ್ದವು. ಕೇಸರಿ ಧ್ವಜಗಳನ್ನು ಹಿಡಿದು ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯು ಸೆಪ್ಟೆಂಬರ್ 9ರಂದು ಸಂಪೂರ್ಣ ಬಂದ್‌ಗೆ ಕಾರಣವಾಯಿತು. ಸ್ಥಳೀಯ ಅಂಗಡಿ-ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದು, ವ್ಯಾಪಾರ-ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ 1,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ನಾಲ್ವರು ಹೆಚ್ಚುವರಿ ಎಸ್‌ಪಿಗಳು, 15 ಡಿವೈಎಸ್‌ಪಿಗಳು, 35 ಇನ್‌ಸ್ಪೆಕ್ಟರ್‌ಗಳು, 80 ಪಿಎಸ್‌ಐಗಳು, 10 ಡಿಎಆರ್ ತುಕಡಿಗಳು ಮತ್ತು 15 ಕೆಎಸ್‌ಆರ್‌ಪಿ ತುಕಡಿಗಳು ಸೇರಿವೆ.

ಪಟ್ಟಣದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 21 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತಷ್ಟು ಆರೋಪಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

Exit mobile version