‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ

Untitled design 2026 02 25T233711.061

ವಿವಾದಾತ್ಮಕ ಕಥಾವಸ್ತುವಿನಿಂದಲೇ ಗಮನ ಸೆಳೆದಿದ್ದ ‘ದಿ ಕೇರಳ ಸ್ಟೋರಿ 2’  ಸಿನಿಮಾ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಫೆಬ್ರವರಿ 27ರಂದು ಬಿಡುಗಡೆಗೊಳ್ಳಬೇಕಿದ್ದ ಈ ಚಿತ್ರಕ್ಕೆ ಕೇರಳ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಫೆಬ್ರವರಿ 25ರಂದು ನಡೆದ ವಿಚಾರಣೆಯಲ್ಲಿ, ಚಿತ್ರದ ವಿರುದ್ಧ ದಾಖಲಾಗಿರುವ ಅರ್ಜಿಗಳ ಕುರಿತು ಸಂಪೂರ್ಣ ವಿಚಾರಣೆ ಮುಗಿಯುವ ತನಕ ಸಿನಿಮಾ ಬಿಡುಗಡೆ ಮಾಡಬಾರದು ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಚಿತ್ರತಂಡವು ಭಾರಿ ಪ್ರಚಾರದೊಂದಿಗೆ ಟೀಸರ್ ಬಿಡುಗಡೆ ಮಾಡಿತ್ತು. ಆದರೆ ಟೀಸರ್ ಬಿಡುಗಡೆಯಾದ ತಕ್ಷಣವೇ ಕೇರಳದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಯಿತು. ಕೆಲ ಸಾಮಾಜಿಕ ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು, ಚಿತ್ರವು ಕೇರಳ ರಾಜ್ಯವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ ಎಂದು ಆರೋಪಿಸಿದರು. ‘ಲವ್ ಜಿಹಾದ್’ ಎಂಬ ಸಂವೇದನಾಶೀಲ ವಿಷಯವನ್ನು ಆಧಾರವನ್ನಾಗಿ ಮಾಡಿಕೊಂಡಿರುವ ಕಥೆ, ಸಮಾಜದಲ್ಲಿ ಅಶಾಂತಿ ಉಂಟುಮಾಡಬಹುದು ಎಂಬ ಆತಂಕವೂ ವ್ಯಕ್ತವಾಯಿತು.

ಚಿತ್ರಕ್ಕೆ ಪ್ರಮಾಣಪತ್ರ ನೀಡಿದ ಸೆನ್ಸಾರ್ ಮಂಡಳಿಯ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಮೂರು ಪ್ರತ್ಯೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿದಾರರು, ಈ ಚಿತ್ರದಿಂದ ರಾಜ್ಯದಲ್ಲಿ ಕೋಮು ಗಲಭೆ ಸಂಭವಿಸುವ ಸಾಧ್ಯತೆ ಇದೆ ಎಂದು ವಾದಿಸಿದ್ದಾರೆ. ಚಿತ್ರವು ಸಮಾಜದ ಶಾಂತಿಗೆ ಧಕ್ಕೆಯಾಗಬಹುದು ಎಂಬ ಕಾರಣವನ್ನು ಮುಂದಿಟ್ಟಿದ್ದಾರೆ.

ವಿಚಾರಣೆ ವೇಳೆ ನಿರ್ಮಾಪಕರು, ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ವಿದೇಶಿ ವಿತರಣೆ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ ಮತ್ತು ಬಿಡುಗಡೆಯನ್ನು ಮುಂದೂಡಿದರೆ ಆರ್ಥಿಕ ನಷ್ಟ ಉಂಟಾಗಬಹುದು ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಆದರೂ, “ಎಲ್ಲಾ ವಾದಗಳನ್ನು ಸಮಗ್ರವಾಗಿ ಆಲಿಸಬೇಕಿದೆ. ಅಲ್ಲಿಯವರೆಗೆ ಬಿಡುಗಡೆ ಮಾಡಬೇಡಿ” ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಈ ಚಿತ್ರವನ್ನು ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶಿಸಿದ್ದು, ಖ್ಯಾತ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ನಿರ್ಮಾಣ ಮಾಡಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಊಜಾ ನಟಿಸಿದ್ದಾರೆ.

2023ರಲ್ಲಿ ಬಿಡುಗಡೆಯಾದ The Kerala Story ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಅದರ ಮುಂದುವರಿದ ಭಾಗವಾಗಿ ‘ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಚಿತ್ರವನ್ನು ತಯಾರಿಸಲಾಗಿತ್ತು. ಮೊದಲ ಭಾಗವೇ ವಿವಾದಕ್ಕೆ ಕಾರಣವಾಗಿದ್ದರಿಂದ, ಸೀಕ್ವೆಲ್ ಮೇಲೂ ಹೆಚ್ಚಿನ ಕಣ್ಣಿತ್ತು.

ಟೀಸರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಕೆಲವರು ಚಿತ್ರವನ್ನು ಬೆಂಬಲಿಸಿದರೆ, ಇನ್ನು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದರು. ರಾಜ್ಯದ ಶಾಂತಿ ಮತ್ತು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ ಎನ್ನಲಾಗುತ್ತಿದೆ.

Exit mobile version