ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಹೇಳಿದ್ದ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ರವಿಕುಮಾರ್‌ಗೆ ತಾತ್ಕಾಲಿಕ ರಿಲೀಫ್ ನೀಡಿದೆ. ರವಿಕುಮಾರ್‌ರವರಿಗೆ ಜುಲೈ 8ರವರೆಗೆ ಬಂಧನದಿಂದ ರಕ್ಷಣೆ ನೀಡಲಾಗಿದ್ದು, ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣದಲ್ಲಿ ರವಿಕುಮಾರ್ ತನಿಖೆಗೆ ಸಹಕರಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ವಿವಾದದ ಹಿನ್ನೆಲೆ
ಶಾಲಿನಿ ರಜನೀಶ್ ಅವರು “ರಾತ್ರಿ ಸರ್ಕಾರಕ್ಕೆ, ಹಗಲು ಸಿಎಂಗೆ ಕೆಲಸ ಮಾಡುತ್ತಾರೆ” ಎಂದು ರವಿಕುಮಾರ್ ಹೇಳಿಕೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್‌ಗಳಾದ 351(3), 75(3), ಮತ್ತು 79ರ ಅಡಿಯಲ್ಲಿ ರವಿಕುಮಾರ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಆರೋಪವನ್ನು ರದ್ದುಗೊಳಿಸುವಂತೆ ಕೋರಿ ರವಿಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕೋರ್ಟ್‌ನಲ್ಲಿ ವಾದ-ಪ್ರತಿವಾದ
ನ್ಯಾಯಮೂರ್ತಿ ಎಸ್. ಆರ್. ಕೃಷ್ಣ ಕುಮಾರ್ ನೇತೃತ್ವದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆಯನ್ನು ನಡೆಸಿತ್ತು. ರವಿಕುಮಾರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ರವಿಕುಮಾರ್‌ರವರ ಹೇಳಿಕೆಯ ಉದ್ದೇಶವು ಶಾಲಿನಿ ರಜನೀಶ್ ಅವರ ಕೆಲಸದ ಬದ್ಧತೆಯನ್ನು ಮೆಚ್ಚುವುದಾಗಿತ್ತು, ಆಕ್ಷೇಪಾರ್ಹವಾಗಿರಲಿಲ್ಲ ಎಂದು ಅವರು ವಾದಿಸಿದರು. ಈ ಸಂದರ್ಭದಲ್ಲಿ ರವಿಕುಮಾರ್‌ರವರ ಹೇಳಿಕೆಯ ವಿಡಿಯೊವನ್ನು ಕೋರ್ಟ್‌ಗೆ ತೋರಿಸಲಾಯಿತು. ವಿಡಿಯೊವನ್ನು ಪರಿಶೀಲಿಸಿದ ನಂತರ, ನ್ಯಾಯಾಲಯವು ಅದರಲ್ಲಿ ಆಕ್ಷೇಪಾರ್ಹವಾದ ಯಾವುದೇ ಅಂಶವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ, ವಿಶೇಷ ಸರ್ಕಾರಿ ಅಭಿಯೋಜಕ ಬಿ. ಎ. ಬೆಳ್ಳಿಯಪ್ಪ ಅವರು ಈ ವಾದವನ್ನು ಒಪ್ಪದೆ, ರವಿಕುಮಾರ್‌ರವರ ಹೇಳಿಕೆಯು ಆಕ್ಷೇಪಾರ್ಹವಾಗಿದೆ ಎಂದು ವಾದಿಸಿದರು. “ರಾತ್ರಿಯ ವೇಳೆ ಸರ್ಕಾರಕ್ಕೆ, ಹಗಲಿನಲ್ಲಿ ಸಿಎಂಗೆ ಕೆಲಸ ಮಾಡುತ್ತಾರೆ” ಎಂಬ ಹೇಳಿಕೆಯು ರವಿಕುಮಾರ್‌ರವರಿಂದ ಗಾಂಧಿ ಪ್ರತಿಮೆಯ ಮುಂದೆ ನೀಡಲ್ಪಟ್ಟಿತ್ತು, ಇದು ಅವರ ಚಾಳಿಯಾಗಿದೆ ಎಂದು ಅವರು ಆರೋಪಿಸಿದರು. ಇಂತಹ ಪ್ರಕರಣಗಳಲ್ಲಿ ಪದೇ ಪದೇ ತಡೆಯಾಜ್ಞೆ ನೀಡುತ್ತಿದ್ದರೆ, ಪೊಲೀಸರ ಸ್ಥೈರ್ಯ ಕುಂದುತ್ತದೆ ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ರವಿಕುಮಾರ್‌ರವರ ಉದ್ದೇಶ ಆಕ್ಷೇಪಾರ್ಹವಾಗಿರಲಿಲ್ಲ ಎಂದು ತಿಳಿಸಿತ್ತು. ದೂರುದಾರೆ ನಾಗರತ್ನ ಅವರು ಟಿವಿಯಲ್ಲಿ ವಿಡಿಯೊವನ್ನು ನೋಡಿ ದೂರು ಸಲ್ಲಿಸಿದ್ದಾರೆ. ಆದರೆ ಅವರು ಸಂತ್ರಸ್ತೆಯಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ರವಿಕುಮಾರ್‌ರವರು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಅರುಣ್ ಶ್ಯಾಮ್ ವಾದಿಸಿದರು. ಜೊತೆಗೆ, ರವಿಕುಮಾರ್‌ರವರ ಮನೆ ಮುಂದೆ ಹತ್ತಕ್ಕೂ ಹೆಚ್ಚು ಪೊಲೀಸರು ಬಂಧನಕ್ಕಾಗಿ ಕಾಯುತ್ತಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿದರು.
ಕೋರ್ಟ್‌ನ ಆದೇಶ
ನ್ಯಾಯಾಲಯವು ರವಿಕುಮಾರ್‌ರವರ ಬಂಧನವನ್ನು ಜುಲೈ 8ರವರೆಗೆ ತಡೆಯಿತು ಮತ್ತು ತನಿಖೆಗೆ ಸಹಕರಿಸುವಂತೆ ಸೂಚಿಸಿತ್ತು. ಈ ಆದೇಶವು ರವಿಕುಮಾರ್‌ಗೆ ತಾತ್ಕಾಲಿಕ ರಿಲೀಫ್ ನೀಡಿದೆ.
