ಬೆಂಗಳೂರು: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯಲಿದ್ದು, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಪ್ರಮಾಣ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ತೆರಳುವ ಮುನ್ನ ಹವಾಮಾನ ಮಾಹಿತಿ ಪರಿಶೀಲಿಸುವಂತೆ ಸೂಚಿಸಲಾಗಿದೆ.
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ಭಾಗಗಳಲ್ಲಿ ಗುಡ್ಡ ಕುಸಿತ, ಮರಗಳು ಉರುಳುವಂತಹ ಘಟನೆಗಳ ಸಂಭವ ಇರುವುದರಿಂದ ಸ್ಥಳೀಯ ಆಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ನದಿ, ಹಳ್ಳ ಹಾಗೂ ತಗ್ಗು ಪ್ರದೇಶಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಮಡಿಕೇರಿಯಲ್ಲಿ ಗರಿಷ್ಠ 24 ಡಿಗ್ರಿ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಇನ್ನೂ ರಾಜ್ಯದ ಹಲವು ನಗರಗಳಲ್ಲಿ ಮಳೆಯೊಂದಿಗೆ ತಾಪಮಾನದಲ್ಲಿ ಏರಿಳಿತ ಕಂಡುಬರಲಿದೆ. ಮಂಗಳೂರಿನಲ್ಲಿ 29-26, ಶಿವಮೊಗ್ಗದಲ್ಲಿ 29-23, ಬೆಳಗಾವಿಯಲ್ಲಿ 27-22, ಮೈಸೂರಿನಲ್ಲಿ 29-22, ಮಂಡ್ಯದಲ್ಲಿ 31-22, ರಾಮನಗರದಲ್ಲಿ 31-22, ಹಾಸನದಲ್ಲಿ 27-21, ಚಾಮರಾಜನಗರದಲ್ಲಿ 30-22, ಚಿಕ್ಕಬಳ್ಳಾಪುರದಲ್ಲಿ 29-21 ಹಾಗೂ ಕೋಲಾರದಲ್ಲಿ 31-21 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ತುಮಕೂರಿನಲ್ಲಿ 27-21, ಉಡುಪಿಯಲ್ಲಿ 30-26, ಕಾರವಾರದಲ್ಲಿ 29-28, ಚಿಕ್ಕಮಗಳೂರಿನಲ್ಲಿ 24-19, ದಾವಣಗೆರೆಯಲ್ಲಿ 30-23, ಹುಬ್ಬಳ್ಳಿಯಲ್ಲಿ 29-23, ಚಿತ್ರದುರ್ಗದಲ್ಲಿ 30-22, ಹಾವೇರಿಯಲ್ಲಿ 29-23, ಬಳ್ಳಾರಿಯಲ್ಲಿ 33-24, ಗದಗದಲ್ಲಿ 29-22, ಕೊಪ್ಪಳದಲ್ಲಿ 32-23, ರಾಯಚೂರಿನಲ್ಲಿ 34-25, ಯಾದಗಿರಿಯಲ್ಲಿ 34-25, ವಿಜಯಪುರದಲ್ಲಿ 32-23 ಹಾಗೂ ಕಲಬುರಗಿಯಲ್ಲಿ 33-24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.
ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ, ವಿದ್ಯುತ್ ತಂತಿಗಳು, ದೊಡ್ಡ ಮರಗಳು ಹಾಗೂ ನೀರು ತುಂಬಿರುವ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಹವಾಮಾನ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.





