ಬೆಂಗಳೂರು, ಮಾರ್ಚ್ 17: ಬಿರು ಬಿಸಿಲಿನ ಬೇಸಿಗೆ (Summer) ಮಧ್ಯೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಈ ಮಳೆ ತುಸು ತಂಪು ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ಪ್ರಕಾರ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ವರುಣ ಅಬ್ಬರಿಸಲಿದ್ದಾನೆ. ಮಹಾರಾಷ್ಟ್ರದಿಂದ ತಮಿಳುನಾಡಿನವರೆಗೆ ಸೃಷ್ಟಿಯಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ರಾಜ್ಯದಲ್ಲಿ ಬೇಸಿಗೆಯಲ್ಲಿಯೂ ಮಳೆಯಾಗುತ್ತಿದ್ದು, ಮಾರ್ಚ್ 21ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇಂದು (ಮಾರ್ಚ್ 17) ಈ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ, ಇಂದು (ಮಾರ್ಚ್ 17) ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಪ್ಪಳ, ವಿಜಯಪುರ, ದಾವಣಗೆರೆ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
11 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ
ಕಲಬುರಗಿ, ಕೊಪ್ಪಳ, ವಿಜಯಪುರ, ದಾವಣಗೆರೆ, ಬೀದರ್, ಚಿಕ್ಕಮಗಳೂರು, ಬಳ್ಳಾರಿ, ವಿಜಯನಗರ, ರಾಯಚೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಜಿಲ್ಲೆಗಳ ಜನರು ಮತ್ತು ರೈತರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಮುಂದಿನ 3 ದಿನಗಳ ಮುನ್ಸೂಚನೆ
-
ಮಾರ್ಚ್ 18: ದಕ್ಷಿಣ ಒಳನಾಡು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ವರ್ಷಧಾರೆ ನಿರೀಕ್ಷೆ ಇದೆ.
-
ಮಾರ್ಚ್ 19: ಚಿತ್ರದುರ್ಗ, ಬೀದರ್, ಕಲಬುರಗಿ, ರಾಯಚೂರು, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ.
-
ಮಾರ್ಚ್ 20-21: ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರು ಹವಾಮಾನ ವರದಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ದಿನದಿಂದ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದ್ದು, ಮುಂದಿನ 4 ದಿನಗಳ ಒಳಗೆ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಆದರೆ ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ಇದ್ದರೂ ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ವರದಿಯಾಗಿದೆ.
ಹವಾಮಾನ ಮುನ್ಸೂಚನೆಗಳ ಪ್ರಕಾರ ಮುಂದಿನ ವಾರದವರೆಗೆ ನಗರದಲ್ಲಿ ಗರಿಷ್ಠ ತಾಪಮಾನ ಸುಮಾರು 30°C ರಿಂದ 33°C ರವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಇಂದು (ಮಾರ್ಚ್ 17) ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
