ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (KVGB) ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಲೀನಗೊಂಡು ಇನ್ನು ಮುಂದೆ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸಲಿವೆ. ಈ ವಿಲೀನದ ಪರಿಣಾಮವಾಗಿ, ಹೊಸ ಬ್ಯಾಂಕ್ ₹1.04 ಲಕ್ಷ ಕೋಟಿ ವಹಿವಾಟು ನಡೆಸುವ, ದೇಶದ ಎರಡನೇ ಬೃಹತ್ ಗ್ರಾಮೀಣ ಬ್ಯಾಂಕ್ ಆಗಿ ರೂಪುಗೊಂಡಿದೆ.
ದೇಶದ 2ನೇ ದೊಡ್ಡ ಗ್ರಾಮೀಣ ಬ್ಯಾಂಕ್ ಆಗಿ ರೂಪುಗೊಂಡ ಕರ್ನಾಟಕ ಗ್ರಾಮೀಣ ಬ್ಯಾಂಕ್
ಗ್ರಾಮೀಣ ಜನರ ಒಡನಾಡಿಯಾಗಿ ಹೆಸರುವಾಸಿಯಾಗಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿ) ಇನ್ನಿಲ್ಲ. ಕೇಂದ್ರ ಸರ್ಕಾರದ ‘ಒಂದು ರಾಜ್ಯ, ಒಂದು ಗ್ರಾಮೀಣ ಬ್ಯಾಂಕ್’ ನೀತಿಯ ಅಡಿಯಲ್ಲಿ, ಧಾರವಾಡದ ಕೇಂದ್ರ ಕಚೇರಿಯ ಕೆವಿಜಿ ಬ್ಯಾಂಕ್ ಮತ್ತು ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮೇ 1, 2025 ರಿಂದ ಒಗ್ಗೂಡಿ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಎಂಬ ಹೊಸ ಹೆಸರಿನಲ್ಲಿ ಕಾರ್ಯನಿರ್ವಹಿಸಲಿವೆ.
ಈ ನೂತನ ಬ್ಯಾಂಕ್‌ಗಾಗಿ ಕೇಂದ್ರ ಸರ್ಕಾರ – 50% ಪಾಲು, ಕರ್ನಾಟಕ ಸರ್ಕಾರ – 15% ಪಾಲು, ಕೆನರಾ ಬ್ಯಾಂಕ್ – 35% ಪಾಲುದಾರಿಕೆಯನ್ನು ಹೊಂದಿವೆ. ಈ ವಿಲೀನದ ಮೂಲಕ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಗ್ರಾಮೀಣ ಬ್ಯಾಂಕಿಂಗ್ ಸೇವೆ ಒದಗಿಸಲು ಅನುವು ಸಿಕ್ಕಿದೆ. ಈ ಬ್ಯಾಂಕ್ ಒಟ್ಟು 1,751 ಶಾಖೆಗಳೊಂದಿಗೆ ₹1,04,851 ಕೋಟಿ ವಹಿವಾಟು ನಡೆಸಲಿದ್ದು, ಇದು ತನ್ನ ವಿಸ್ತಾರ, ವಿಶ್ವಾಸಾರ್ಹತೆ ಮತ್ತು ಗ್ರಾಹಕ ಸೇವೆಯಲ್ಲಿ ದೊಡ್ಡ ಹೆಜ್ಜೆಯಾಗಿದೆ.
ಈ ನೂತನ ಬ್ಯಾಂಕಿನ ಅಧ್ಯಕ್ಷರಾಗಿ ಶ್ರೀಕಾಂತ ಎಂ. ಭಂಡಿವಾಡ ನೇಮಕಗೊಂಡಿದ್ದಾರೆ. ಕೃಷಿಯಲ್ಲಿ ಪದವೀಧರರಾಗಿರುವ ಅವರು 31 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿದ್ದಾರೆ. ಅವರು ಹಿಂದಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿದ್ದರು.
ವಿಲೀನಕ್ಕೆ ಮುಂಚೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ – 9 ಜಿಲ್ಲೆಗಳು, 629 ಶಾಖೆಗಳು, ₹38,714 ಕೋಟಿ ವಹಿವಾಟು ಇತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್ – 22 ಜಿಲ್ಲೆಗಳು, 1,122 ಶಾಖೆಗಳು, ₹66,137 ಕೋಟಿ ವಹಿವಾಟು ಇತ್ತು.
1975ರಲ್ಲಿ ಪ್ರಾರಂಭವಾದ ಗ್ರಾಮೀಣ ಬ್ಯಾಂಕುಗಳ ಪರಿಕಲ್ಪನೆಯು ಕಾಲಾಂತರದಲ್ಲಿ 2005ರಿಂದ ವಿಲೀನದ ಹಾದಿ ಹಿಡಿದು, ಇಂದು ದೇಶದಲ್ಲಿ 43 ಗ್ರಾಮೀಣ ಬ್ಯಾಂಕುಗಳು ಮಾತ್ರ ಉಳಿದಿವೆ. ಈ ವಿಲೀನದ ನಂತರ, ಕರ್ನಾಟಕದ ಗ್ರಾಮೀಣ ಪ್ರದೇಶಕ್ಕೆ ಇನ್ನಷ್ಟು ಸಮರ್ಥವಾದ ಬ್ಯಾಂಕಿಂಗ್ ಸೇವೆ ಒದಗಿಸುವ ಆಶಯ ವ್ಯಕ್ತವಾಗಿದೆ.
ಇದೇ ಸಂಪ್ರದಾಯದಲ್ಲಿ ನೂತನ ಬ್ಯಾಂಕ್ ಕಾರ್ಯನಿರ್ವಹಿಸಿ, ಗ್ರಾಹಕರಿಗೆ ಭದ್ರತೆ, ವಿಶ್ವಾಸ ಮತ್ತು ಉತ್ತಮ ಸೇವೆ ಒದಗಿಸಲಿದೆ. ಗ್ರಾಹಕರ ಸಹಕಾರದಿಂದ ಈ ನೂತನ ಹೆಜ್ಜೆ ಯಶಸ್ವಿಯಾಗಲಿದೆ ಎಂದು ಶ್ರೀ ಭಂಡಿವಾಡ ತಿಳಿಸಿದ್ದಾರೆ.
