ಕರ್ನಾಟಕ ವಿಧಾನಮಂಡಲದ ವಿಶೇಷ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೇವಲ 1 ನಿಮಿಷದಷ್ಟು ಭಾಷಣ ಮಾಡಿ ಹೊರಟಿದ್ದು, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರ ತಯಾರಿಸಿದ ಭಾಷಣದ ಮೊದಲ ಎರಡು ಸಾಲುಗಳಷ್ಟೇ ಓದಿ, “ಎಲ್ಲರಿಗೂ ನಮಸ್ಕಾರ” ಎಂದು ಕನ್ನಡದಲ್ಲಿ ಹೇಳಿ ಶುಭಾಶಯಗಳನ್ನು ತಿಳಿಸಿ ತಕ್ಷಣ ಹೊರಟುಹೋದರು.
ಭಾಷಣ ಮುಗಿದ ಕೂಡಲೇ ವಿಧಾನಸಭೆಯಲ್ಲಿ ಗದ್ದಲ ಆರಂಭವಾಯಿತು. ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ಹೊರಡುವ ದಾರಿಯಲ್ಲೇ ಹೊರಟು ಘೋಷಣೆಗಳನ್ನು ಕೂಗುತ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಸರ್ಕಾರ ತಯಾರಿಸಿದ ಭಾಷಣವನ್ನು ಸಂಪೂರ್ಣವಾಗಿ ಓದಬೇಕು.
ರಾಜ್ಯಪಾಲರು ಭಾಷಣದಲ್ಲಿ ಕೇಂದ್ರ ವಿರೋಧಿ 11 ಅಂಶಗಳನ್ನು (ಬರ ಪರಿಹಾರ ವಿಳಂಬ, ತೆರಿಗೆ ಹಂಚಿಕೆ ಅನ್ಯಾಯ, MGNREGA ರದ್ದುಪಡಿಸಿ VB-G RAM G ಜಾರಿ ಮುಂತಾದವು) ಓದಲು ನಿರಾಕರಿಸಿದ್ದರು. ಸ್ಪೀಕರ್ ಅವರ ಮನವೊಲಿಕೆಗೂ ಕಿವಿಗೊಡದೇ ಅವರು ಹೊರಟುಹೋದರು. ಇದು ತಮಿಳುನಾಡು ಮತ್ತು ಕೇರಳದಲ್ಲಿ ನಡೆದ ರಾಜ್ಯಪಾಲರು vs ಸರ್ಕಾರದ ಡ್ರಾಮಾವನ್ನು ಹೋಲುತ್ತಿದ್ದು, ದಕ್ಷಿಣ ರಾಜ್ಯಗಳಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ಭಾರಿ ಚರ್ಚೆಗೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರು ಇದನ್ನು ಸಂವಿಧಾನದ ಉಲ್ಲಂಘನೆ ಎಂದು ಆರೋಪಿಸಿದ್ದು, ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವ ಸಾಧ್ಯತೆಯನ್ನು ಸೂಚಿಸಿದ್ದಾರೆ. ವಿರೋಧ ಪಕ್ಷಗಳು ರಾಜ್ಯಪಾಲರ ನಿಲುವನ್ನು ಬೆಂಬಲಿಸುತ್ತಿವೆ. ಈ ಘಟನೆಯಿಂದ ಅಧಿವೇಶನದ ಉಳಿದ ದಿನಗಳಲ್ಲಿ ರಾಜಕೀಯ ಘರ್ಷಣೆ ತೀವ್ರಗೊಳ್ಳುವ ನಿರೀಕ್ಷೆ ಇದೆ.





