ಬೀದರ್: ರಾಜ್ಯದಲ್ಲಿ ವನ್ಯಜೀವಿ-ಮಾನವ ಸಂಘರ್ಷವು ತೀವ್ರ ರೂಪ ತಾಳಿರುವ ಹಿನ್ನೆಲೆಯಲ್ಲಿ, ನಾಗರಹೊಳೆ ಸಫಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಬೀದರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ 6 ಗಂಟೆ ನಂತರದ ಸಫಾರಿ ಟ್ರಿಪ್ಗಳು ಪ್ರಾಣಿಗಳಿಗೆ ತೊಂದರೆಯಾಗಿದ್ದು, ಇದರಿಂದಾಗಿ ಅವು ವಸತಿ ಪ್ರದೇಶಗಳ ಕಡೆಗೆ ಬರುತ್ತಿದ್ದವೆಂದು ಹೇಳಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದಲ್ಲಿ ಕಳೆದ 10 ವರ್ಷಗಳಲ್ಲಿ 45ರಿಂದ 60 ಜನರು ಪ್ರಾಣಕ್ಕೆ ತುತ್ತಾಗಿದ್ದಾರೆ. ಮಾನವ ಜೀವ ಅತ್ಯಮೂಲ್ಯ. ಒಂದೇ ಒಂದು ಸಾವು ಸಹ ನಮಗೆ ಸಹನೀಯವಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ರಾತ್ರಿ ಸಫಾರಿಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಇದರ ಭಾಗವಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ತಮಿಳನಾಡಿನಿಂದ ಸುಮಾರು 20,000 ಜಾನುವಾರುಗಳು ನಮ್ಮ ಅರಣ್ಯ ಪ್ರದೇಶಗಳಲ್ಲಿ ಮೇಯುತ್ತಿವೆ. ಇವು ಹುಲಿಗಳ ಪ್ರಮುಕ ಆಹಾರದ ಮೂಲವಾಗಿದ್ದು, ಇದರಿಂದಾಗಿ ಮಾನವ-ಹುಲಿ ಸಂಘರ್ಷ ಹೆಚ್ಚಾಗುತ್ತಿದೆ. ಇತ್ತೀಚೆಗೆ ವಿಷಪ್ರಾಶನದಿಂದ ಐದು ಹುಲಿಗಳು ಸಾವನ್ನಪ್ಪಿದ್ದು, ಇದು ಅತ್ಯಂತ ವಿಷಾದಜನಕ ಘಟನೆ ಎಂದು ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಗೆ ಪರಿಹಾರವಾಗಿ, ಅರಣ್ಯ ಇಲಾಖೆಯು ಈಗ ಒಂದು ಕ್ಷೇತ್ರ ಸರ್ವೆ ನಡೆಸಲಿದೆ. ನಾವು ಅರಣ್ಯ ಅಂಚಿನಲ್ಲಿ ವಾಸಿಸುವ ಸ್ಥಳೀಯ ರೈತರ ಜಾನುವಾರುಗಳನ್ನು ಮಾತ್ರ ಮೇಯಿಸಲು ಅನುಮತಿಸುತ್ತೇವೆ. ಬೇರೆ ರಾಜ್ಯಗಳ ಜಾನುವಾರುಗಳನ್ನು ನಮ್ಮ ಅರಣ್ಯಗಳಲ್ಲಿ ಮೇಯಿಸಲು ಅನುಮತಿ ಇಲ್ಲ. ನಾವು ಸಂಪೂರ್ಣ ಸರ್ವೆ ನಡೆಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ನಿರ್ಧರಿಸಿದ್ದೇವೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಬೆಳೆಹಾನಿ ಪರಿಹಾರದ ವಿಷಯದಲ್ಲಿ, ಜಿಲ್ಲೆಯಲ್ಲಿ ದಾಖಲೆಯ ಮಳೆಯಿಂದ 1 ಲಕ್ಷ 68 ಸಾವಿರ ಎಕರೆ ಭೂಮಿಯ ಬೆಳೆ ನಷ್ಟಟಾಗಿದೆ ಎಂದು ಖಂಡ್ರೆ ತಿಳಿಸಿದರು. ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 143 ಕೋಟಿ ರೂಪಾಯಿಗಳ ಬೆಳೆ ಹಾನಿಯಾಗಿದ್ದು, ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುವುದು. 61 ಕೋಟಿ ರೂಪಾಯಿಗಳನ್ನು ಮುಂದಿನ ಮೂರು ದಿನಗಳಲ್ಲಿ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಘೋಷಿಸಿದ್ದಾರೆ.





