ಇನ್ಮುಂದೆ ಕರ್ನಾಟಕದ ಎಲ್ಲಾ ಅರಣ್ಯಗಳಲ್ಲಿ ದನ, ಕುರಿ, ಮೇಯಿಸುವಂತಿಲ್ಲ: ಸಚಿವ ಈಶ್ವರ ಖಂಡ್ರೆ

ಅರಣ್ಯ ಸಂರಕ್ಷಣೆಗೆ ಹೊಸ ಕ್ರಮ: ಕಾಡಿನಲ್ಲಿ ದನ, ಕುರಿ, ಮೇಕೆ ಮೇಯಿಸುವುದು ನಿಷೇಧ!

111 (12)

ಬೆಂಗಳೂರು: ಕರ್ನಾಟಕದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ದನ, ಕುರಿ, ಮತ್ತು ಮೇಕೆಗಳನ್ನು ಮೇಯಿಸುವುದನ್ನು ನಿಷೇಧಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ದೊಡ್ಡ ಸಂಖ್ಯೆಯ ಜಾನುವಾರುಗಳನ್ನು ಅರಣ್ಯದಲ್ಲಿ ಮೇಯಲು ಬಿಡುವುದರಿಂದ ಆಗಷ್ಟೇ ಮೊಳಕೆಯೊಡೆದ ಚಿಕ್ಕ ಸಸಿಗಳು ಜಾನುವಾರುಗಳ ಆಹಾರವಾಗಿ, ಹೊಸ ಗಿಡಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಇದರಿಂದ ಅರಣ್ಯ ಸಂವರ್ಧನೆಗೆ ತೊಡಕು ಉಂಟಾಗುತ್ತದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಜಾನುವಾರುಗಳಿಂದ ಕಾಡಿನ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಿಂದ ಕಾಡಿಗೆ ತಂದ ಜಾನುವಾರುಗಳಿಂದ ವನ್ಯಜೀವಿಗಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಇದೆ.

ADVERTISEMENT
ADVERTISEMENT

ಅರಣ್ಯ ಸಂವರ್ಧನೆಯಾಗದಿದ್ದರೆ, ಅದು ಕಾಡಿನಲ್ಲಿ ಹರಿಯುವ ನದಿಗಳ ಮೇಲೆ ಪರಿಣಾಮ ಬೀರಿ, ವನ್ಯಜೀವಿ-ಮಾನವ ಸಂಘರ್ಷವನ್ನು ಹೆಚ್ಚಿಸುತ್ತದೆ. ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಕರೆದೊಯ್ಯುವ ದನಗಾಹಿಗಳು ವನ್ಯಜೀವಿಗಳ ದಾಳಿಗೆ ಒಳಗಾದರೆ, ಅಂತಹ ಪ್ರಕರಣಗಳಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇದಲ್ಲದೇ, ವನ್ಯಜೀವಿಗಳು ಜಾನುವಾರುಗಳನ್ನು ಕೊಂದಾಗ, ಕೆಲವರು ಆಕ್ರೋಶದಿಂದ ಮೃತ ಜಾನುವಾರುಗಳಿಗೆ ವಿಷಹಾಕುವುದರಿಂದ ವನ್ಯಜೀವಿಗಳು ಸಾವಿಗೀಡಾಗುತ್ತವೆ. ಇತ್ತೀಚೆಗೆ ಹೂಗ್ಯಂ ವಲಯದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷದಿಂದ ಸಾವನ್ನಪ್ಪಿರುವುದು ಇದಕ್ಕೆ ಸಾಕ್ಷಿಯಾಗಿದೆ.

 

ಇದೇ ರೀತಿ, ಮದ್ರಾಸ್ ಹೈಕೋರ್ಟ್‌ನ ತಮಿಳುನಾಡಿನ ಅರಣ್ಯಗಳಲ್ಲಿ ಜಾನುವಾರು ಮೇಯಿಸುವಿಕೆಯನ್ನು ನಿಷೇಧಿಸುವ ತೀರ್ಪಿನ ನಂತರ, ನೆರೆಯ ರಾಜ್ಯಗಳಿಂದ ಕರ್ನಾಟಕದ ಅರಣ್ಯಗಳಿಗೆ ಜಾನುವಾರುಗಳನ್ನು ತಂದು ಮೇಯಿಸುವ ಪ್ರಕರಣಗಳು ಹೆಚ್ಚಾಗಿವೆ. ಆದ್ದರಿಂದ, ಕರ್ನಾಟಕದ ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಯ ದೃಷ್ಟಿಯಿಂದ, ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಜಾನುವಾರು ಮೇಯಿಸುವಿಕೆಯನ್ನು ನಿರ್ಬಂಧಿಸಲು ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಸಚಿವರು ಆದೇಶಿಸಿದ್ದಾರೆ.

Exit mobile version