ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕಟ್ಟುನಿಟ್ಟಿನ ತರಾಟೆಯ ಹಿನ್ನೆಲೆಯಲ್ಲಿ ರಾಜ್ಯದ ಸಾರಿಗೆ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ. ಹೈಕೋರ್ಟ್‌ನ ಸೂಚನೆಯ ಮೇರೆಗೆ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ ಅಧ್ಯಕ್ಷ ಅನಂತ ಸುಬ್ಬಾರಾವ್, ಮುಷ್ಕರವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಕಾರಣದಿಂದಾಗಿ, ಮಂಗಳವಾರ ಸಂಜೆಯಿಂದ ರಾಜ್ಯಾದ್ಯಂತ ಸಾರಿಗೆ ಬಸ್‌ಗಳ ಸಂಚಾರ ಎಂದಿನಂತೆ ಆರಂಭವಾಗಿದೆ.
ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ನ್ಯಾಯಪೀಠವು ಸಾರಿಗೆ ನೌಕರರಿಗೆ ತೀವ್ರ ಎಚ್ಚರಿಕೆ ನೀಡಿತ್ತು. “ಜನರಿಗೆ ನಿಮ್ಮ ಮುಷ್ಕರದಿಂದ ತೊಂದರೆಯಾಗಬಾರದು. ಮುಷ್ಕರವನ್ನು ಸ್ಥಗಿತಗೊಳಿಸಿದ ಬಗ್ಗೆ ನಾಳೆಯೊಳಗೆ ಮಾಹಿತಿ ನೀಡಿ. ಇಲ್ಲವಾದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುವುದಾಗಿ” ನ್ಯಾಯಾಲಯ ಎಚ್ಚರಿಕೆ ನೀಡಿದೆ. ಇದರ ಜೊತೆಗೆ, ಮುಷ್ಕರ ಮುಂದುವರಿಸಿದರೆ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಅಡಿಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬಹುದು ಎಂದೂ ಹೈಕೋರ್ಟ್ ತಿಳಿಸಿದೆ.
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (ಪಿಐಎಲ್)ಯೊಂದನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಂಘಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, ಮುಷ್ಕರದಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿತ್ತು.
ಹೈಕೋರ್ಟ್‌ನ ಈ ಕಟ್ಟುನಿಟ್ಟಿನ ಎಚ್ಚರಿಕೆಯಿಂದ ಸಾರಿಗೆ ನೌಕರರ ಸಂಘಟನೆಯ ಜಂಟಿ ಕ್ರಿಯಾ ಸಮಿತಿಯ ವಕೀಲರು ತಬ್ಬಿಬ್ಬಾದರು. ಅವರು ನ್ಯಾಯಾಲಯಕ್ಕೆ, “ನಾಳೆಯಿಂದ ಮುಷ್ಕರವನ್ನು ನಡೆಸುವುದಿಲ್ಲ” ಎಂದು ತಿಳಿಸಿದರು. “ನಾವು ಮುಷ್ಕರವನ್ನು ಕೈಬಿಟ್ಟಿಲ್ಲ, ಆದರೆ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದೇವೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುತ್ತೇವೆ” ಎಂದು ಅನಂತ ಸುಬ್ಬಾರಾವ್ ಸ್ಪಷ್ಟಪಡಿಸಿದ್ದಾರೆ.