ಕರ್ನಾಟಕದಾದ್ಯಂತ ಒಣ ಹವೆಯ ವಾತಾವರಣ ಮುಂದುವರೆದಿದ್ದು, ಮಳೆಯ ಯಾವುದೇ ಸಾಧ್ಯತೆ ಇಲ್ಲ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಆದರೆ ರಾಜಧಾನಿ ಬೆಂಗಳೂರು ಸೌಮ್ಯ ಮತ್ತು ತಂಪಾದ ಹವಾಮಾನವನ್ನು ಅನುಭವಿಸಲಿದೆ.
ಯಾವ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ?
ದಕ್ಷಿಣ ಒಳನಾಡು: ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆ ಇಲ್ಲದ ಒಣ ಹವೆಯೇ ಇರಲಿದೆ. ಮುಂಜಾನೆ ಮಂಜು ಅಥವಾ ಸ್ವಲ್ಪ ತಂಪು ಇರಬಹುದು, ಆದರೆ ದಿನದ ವೇಳೆ ಬಿಸಿಲು ಮತ್ತು ಶುಷ್ಕ ಗಾಳಿ ಇರಲಿದೆ.
ಕರಾವಳಿ ಪ್ರದೇಶ : ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಪೂರ್ಣ ಒಣ ಹವೆ ಮುಂದುವರಿಯಲಿದೆ. ಮಳೆಯ ಸಾಧ್ಯತೆ ಶೂನ್ಯವಾಗಿದ್ದು, ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಬಹುದು.
ಉತ್ತರ ಒಳನಾಡು : ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಇರುವ ಒಣ ಹವೆಯ ಪ್ರವೃತ್ತಿ ಮುಂದುವರಿಯಲಿದೆ. ಗರಿಷ್ಠ ತಾಪಮಾನ 27ಡಿಗ್ರಿ ಸೆಲ್ಸಿಯಸ್ ರ ವರೆಗೆ ತಲುಪಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರಿನ ಹವಾಮಾನ ವಿಶೇಷತೆ
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಂಪಾದ ಮತ್ತು ಸೌಮ್ಯ ಹವಾಮಾನ ಮುಂದುವರಿಯಲಿದೆ. ಕನಿಷ್ಠ ತಾಪಮಾನ 15-18ಡಿಗ್ರಿ ಸೆಲ್ಸಿಯಸ್ ಸುತ್ತಲೂ ಮತ್ತು ಗರಿಷ್ಠ ತಾಪಮಾನ 29-31°C ವರೆಗೆ ಇರಲಿದ್ದು, ಮುಂಜಾನೆ ಮಂಜು ಮತ್ತು ದಿನದ ವೇಳೆ ಸ್ವಚ್ಛ ಆಕಾಶವಿರಲಿದೆ. ಇದು ರಾಜ್ಯದ ಇತರ ಭಾಗಗಳಿಗಿಂತ ತಂಪಾಗಿರುವುದರಿಂದ ನಗರವಾಸಿಗಳಿಗೆ ಸ್ವಲ್ಪ ಪರಿಹಾರ ದೊರೆಯಲಿದೆ.
ಹವಾಮಾನ ಇಲಾಖೆಯ ಸಲಹೆ
ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ನಿರಂತರ ಒಣ ಹವೆಯನ್ನು ಎದುರಿಸಲು ಸಿದ್ಧರಾಗಿರಿ. ನೀರಿನ ಕೊರತೆ, ಶುಷ್ಕ ಚರ್ಮ ಮತ್ತು ಉಸಿರಾಟದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ಕೃಷಿ ಕ್ಷೇತ್ರದಲ್ಲಿ ನೀರಾವರಿ ಮತ್ತು ಇತರ ಕ್ರಮಗಳನ್ನು ತೆಗೆದುಕೊಳ್ಳಿ ಎಂದು IMD ಸೂಚಿಸಿದೆ.
