ಬೆಂಗಳೂರು: ಈಗಾಗಲೇ ಚಿನ್ನ, ಬೆಳ್ಳಿ, ತರಕಾರಿ, ಹಣ್ಣು ಹಾಗೂ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬರೆ ಬಿದ್ದಿದೆ. ಅಡುಗೆ ಮನೆಯಲ್ಲಿ ಪ್ರತಿದಿನ ಬಳಸುವ ಅಗತ್ಯ ಆಹಾರ ಪದಾರ್ಥಗಳಾದ ಅಕ್ಕಿ, ಬೇಳೆ ಕಾಳುಗಳು, ಮಸಾಲೆ ಪದಾರ್ಥಗಳು, ಡ್ರೈಫ್ರೂಟ್ಸ್ ಸೇರಿದಂತೆ ಹಲವು ದಿನಸಿ ವಸ್ತುಗಳ ಬೆಲೆ ಕಳೆದ ಕೆಲ ವಾರಗಳಿಂದ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಮಾಸಿಕ ಖರ್ಚು ಮತ್ತಷ್ಟು ಹೆಚ್ಚುವ ಸಾಧ್ಯತೆ ಎದುರಾಗಿದೆ.
ಮಾರುಕಟ್ಟೆಯಲ್ಲಿ ಮಸಾಲೆ ಪದಾರ್ಥಗಳ ಬೆಲೆ ನಿರಂತರ ಏರಿಕೆಯಾಗುತ್ತಿದೆ. ಅವುಗಳಲ್ಲಿ ಏಲಕ್ಕಿಯ ಬೆಲೆ ದಾಖಲೆಯ ಮಟ್ಟ ತಲುಪಿದ್ದು, ಒಂದು ಕೆ.ಜಿ.ಗೆ ಸುಮಾರು ₹4,000ಕ್ಕೆ ಏರಿಕೆಯಾಗಿದೆ. ಕೆಲ ತಿಂಗಳ ಹಿಂದಷ್ಟೇ ₹2,800ರಷ್ಟಿದ್ದ ಏಲಕ್ಕಿ ದರದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದೇ ರೀತಿ ದನಿಯಾ, ಜೀರಿಗೆ ಹಾಗೂ ಸಾಸಿವೆ ಬೆಲೆಗಳಲ್ಲೂ ಹೆಚ್ಚಳ ದಾಖಲಾಗಿದೆ.
ಬೇಳೆ ಕಾಳುಗಳ ಬೆಲೆಯೂ ಸಾಮಾನ್ಯ ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ. ಉದ್ದಿನ ಬೇಳೆ, ತೊಗರಿ ಬೇಳೆ, ಕಡಲೆಕಾಳು ಸೇರಿದಂತೆ ಹಲವು ಕಾಳುಗಳ ಬೆಲೆ ಏರಿಕೆಯಾಗಿದ್ದು, ಮನೆ ಬಜೆಟ್ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದರ ಜೊತೆಗೆ ಸಕ್ಕರೆ, ಬೆಲ್ಲ, ಹುಣಸೆಹಣ್ಣು ಹಾಗೂ ವಿವಿಧ ಬಗೆಯ ಒಣ ಮೆಣಸಿನಕಾಯಿಗಳ ಬೆಲೆಯೂ ಏರಿಕೆಯಾಗಿರುವುದರಿಂದ ದಿನಸಿ ಖರೀದಿ ದುಬಾರಿಯಾಗಿದೆ.
ಡ್ರೈಫ್ರೂಟ್ಸ್ ವಿಭಾಗದಲ್ಲೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಬಾದಾಮಿ ಸೇರಿದಂತೆ ಕೆಲವು ಪ್ರಮುಖ ಡ್ರೈಫ್ರೂಟ್ಸ್‌ಗಳ ದರ ಹೆಚ್ಚಳವಾಗಿರುವುದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಇಬ್ಬರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆಯಿಂದ ಗ್ರಾಹಕರ ಖರೀದಿ ಪ್ರಮಾಣ ಕುಸಿದಿದ್ದು, ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಈ ಬಾರಿ ಮಳೆ ಕೊರತೆ, ಕೆಲವು ಪ್ರದೇಶಗಳಲ್ಲಿ ಇಳುವರಿ ಕಡಿಮೆಯಾಗಿರುವುದು ಹಾಗೂ ಸಾಗಾಣಿಕೆ ವೆಚ್ಚ ಹೆಚ್ಚಳವಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಉತ್ಪಾದನೆ ಕಡಿಮೆಯಾದ ಪರಿಣಾಮ ಮಾರುಕಟ್ಟೆಗೆ ಸರಕು ಪೂರೈಕೆ ಇಳಿಕೆಯಾಗಿದ್ದು, ಬೇಡಿಕೆ ಹೆಚ್ಚಿರುವ ಕಾರಣ ದರಗಳು ಗಗನಕ್ಕೇರಿವೆ.
ಇತ್ತೀಚೆಗೆ ನಂದಿನಿ ತುಪ್ಪ ಹಾಗೂ ಬೆಣ್ಣೆ ದರ ಏರಿಕೆಯೂ ಗ್ರಾಹಕರಿಗೆ ಆಘಾತ ನೀಡಿತ್ತು. ಇದೀಗ ಅದರ ಬೆನ್ನಲ್ಲೇ ಅಗತ್ಯ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಸಾಮಾನ್ಯ ಕುಟುಂಬಗಳ ಮಾಸಿಕ ವೆಚ್ಚದಲ್ಲಿ ಸಾವಿರಾರು ರೂಪಾಯಿಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹಬ್ಬಗಳ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಆತಂಕವೂ ವ್ಯಕ್ತವಾಗುತ್ತಿದೆ.
ಪ್ರಮುಖ ವಸ್ತುಗಳ ಹಳೆಯ ಮತ್ತು ಹೊಸ ದರ (ಪ್ರತಿ ಕೆ.ಜಿ.)
- ಏಲಕ್ಕಿ: ₹2,800 → ₹4,000
- ದನಿಯಾ: ₹250 → ₹310
- ಸಕ್ಕರೆ: ₹45 → ₹51
- ಉದ್ದಿನ ಬೇಳೆ: ₹120 → ₹145
- ತೊಗರಿ ಬೇಳೆ: ₹118 → ₹130
- ಹುಣಸೆಹಣ್ಣು: ₹210 → ₹235
- ಬೆಲ್ಲ: ₹56 → ₹65
- ಕಡಲೆಕಾಳು: ₹70 → ₹82
- ಜೀರಿಗೆ: ₹260 → ₹300
- ಸಾಸಿವೆ: ₹95 → ₹120
ಅಗತ್ಯ ಆಹಾರ ಪದಾರ್ಥಗಳ ನಿರಂತರ ಬೆಲೆ ಏರಿಕೆ ಜನಸಾಮಾನ್ಯರ ಜೀವನ ನಿರ್ವಹಣೆಯ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದ್ದು, ಸರ್ಕಾರದಿಂದ ಬೆಲೆ ನಿಯಂತ್ರಣ ಕ್ರಮಗಳ ನಿರೀಕ್ಷೆ ಹೆಚ್ಚಾಗಿದೆ.
