ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರ ಸಾ*ವು

Untitled design 2026 05 30T183418.013

ಧಾರವಾಡ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ನಡೆದಿದೆ. 

ಮೃತರ ವಿವರ
ಮೃತ ಬಾಲಕರನ್ನು ಸಿಂಗನಹಳ್ಳಿ ಗ್ರಾಮದ ನಿವಾಸಿಗಳಾದ ಅಬ್ಬಾಸ್ ವಟ್ನಾಳ್ (12)ಅಸ್ಲಂ ವಟ್ನಾಳ್ (10) ಹಾಗೂ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಸುಭಾನಿ ಬಾಗೋಜಿಕೊಪ್ಪ (10) ಎಂದು ಗುರುತಿಸಲಾಗಿದೆ. ಅಬ್ಬಾಸ್ ಮತ್ತು ಅಸ್ಲಂ ಅವರು ಸಹೋದರರಾಗಿದ್ದಾರೆ. ಮೂವರೂ ಆಪ್ತ ಸ್ನೇಹಿತರಾಗಿದ್ದರು.

ಘಟನೆಯ ಹಿನ್ನೆಲೆ
ತೀವ್ರ ಬಿಸಿಲಿನ ಝಳಕ್ಕೆ ತಪ್ಪಿಸಿಕೊಳ್ಳಲು ಈ ಮೂವರು ಬಾಲಕರು ಸಿಂಗನಹಳ್ಳಿ ಗ್ರಾಮದ ಬಳಿಯಿರುವ ಕೆರೆಗೆ ಈಜಲು ಹೋಗಿದ್ದರು. ಆದರೆ ಆಳವಾದ ನೀರಿನಲ್ಲಿ ಸಿಲುಕಿಕೊಂಡು ಮೂವರೂ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಶವಗಳ ಪತ್ತೆ
ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಶ್ರಮದ ನಂತರ ಮೂವರು ಬಾಲಕರ ಶವಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಸ್ಥಳಕ್ಕೆ ಧಾರವಾಡ ಎಸ್‌ಪಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಘೋರ ದುರಂತ: ಕೃಷಿ ಹೊಂಡದಲ್ಲಿ ಈಜಲು ಹೋದ ನಾಲ್ವರು ಮಕ್ಕಳು ದಾರುಣ ಸಾ*ವು

ಯಾದಗಿರಿ: ಶಾಲೆಗೆ ರಜೆ ಇತ್ತು ಎಂಬ ಖುಷಿಯಲ್ಲಿ ಆಟವಾಡಲು ಹೋದ ನಾಲ್ವರು ಪುಟಾಣಿ ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಸಂಭವಿಸಿದೆ.

ಘಟನೆಯ ವಿವರ:

ಮೃತಪಟ್ಟ ದುರ್ದೈವಿಗಳನ್ನು ಕಿರಣ್ (6 ವರ್ಷ), ಬಸಮ್ಮ (11 ವರ್ಷ), ಶರತ್ (6 ವರ್ಷ) ಮತ್ತು ಹನುಮೇಶ್ (7 ವರ್ಷ) ಎಂದು ಗುರುತಿಸಲಾಗಿದೆ. ಭಾನುವಾರ ಶಾಲಾ ರಜೆಯಾದ ಕಾರಣ, ಈ ನಾಲ್ವರು ಮಕ್ಕಳು ಸೇರಿ ಗ್ರಾಮದ ಸಮೀಪವಿರುವ ಕೃಷಿ ಹೊಂಡಕ್ಕೆ ಈಜಲು ತೆರಳಿದ್ದರು. ಹೊಂಡದಲ್ಲಿ ನೀರಿನ ಆಳದ ಅರಿವಿಲ್ಲದೆ ಇಳಿದ ಮಕ್ಕಳು, ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರಂತೆ ನಾಲ್ವರೂ ಸಾವನ್ನಪ್ಪಿದ್ದಾರೆ.

ಮಕ್ಕಳು ಆಟವಾಡಲು ಹೋದವರು ದೀರ್ಘಕಾಲದವರೆಗೆ ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ಹುಡುಕಾಡಿದ್ದಾರೆ. ಬಳಿಕ ಕೃಷಿ ಹೊಂಡದ ಬಳಿ ಮಕ್ಕಳ ಬಟ್ಟೆಗಳು ಪತ್ತೆಯಾದಾಗ ಅನುಮಾನಗೊಂಡು ಹೊಂಡದಲ್ಲಿ ಹುಡುಕಾಡಿದಾಗ ನಾಲ್ವರೂ ಮಕ್ಕಳ ಶವಗಳು ಪತ್ತೆಯಾಗಿವೆ. ಎಳೆಯ ಕಂದಮ್ಮಗಳ ಮೃತ ದೇಹಗಳನ್ನು ಕಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಯ ತಿಳಿದ ತಕ್ಷಣ ಕೆಂಭಾವಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ರಕ್ಷಣಾ ಬೇಲಿ ಇಲ್ಲದ ಕೃಷಿ ಹೊಂಡಗಳು ಮಕ್ಕಳ ಪಾಲಿಗೆ ಮೃತ್ಯುಕೂಪಗಳಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Exit mobile version