ಬೆಂಗಳೂರು: ರಾಜಧಾನಿಯಲ್ಲಿ ಅತ್ಯಂತ ವಿಚಿತ್ರ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ ಕಲಿಸಬೇಕಾದ ಕಾಲೇಜು ಪ್ರಾಧ್ಯಾಪಕಿಯೊಬ್ಬರು, ರಜೆ ದಿನಗಳಲ್ಲಿ ಹೈಟೆಕ್ ಕಳ್ಳಿಯಾಗಿ ಬದಲಾಗುತ್ತಿದ್ದ ಘಟನೆ ಬಸವನಗುಡಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ರೇವತಿ ಎಂದು ಗುರುತಿಸಲಾಗಿದೆ.
ಮದುವೆ ಮನೆಗಳೇ ಈಕೆಯ ಟಾರ್ಗೆಟ್!
ಮೂಲತ: ಶಿವಮೊಗ್ಗ ಮೂಲದ ರೇವತಿ ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಾಗಿದ್ಲು. ಬೆಳ್ಳಂದೂರು ಬಳಿಯ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಳು. ವಾರಪೂರ್ತಿ ಗೌರವಯುತವಾಗಿ ಪಾಠ ಮಾಡುತ್ತಿದ್ದ ಈಕೆ, ಭಾನುವಾರ ಅಥವಾ ಕಾಲೇಜಿಗೆ ರಜೆ ಇದ್ದ ದಿನಗಳಲ್ಲಿ ತನ್ನ ಅಸಲಿ ಮುಖವಾಡ ಕಳಚುತ್ತಿದ್ದಳು. ಮದುವೆಗೆ ಹೋಗುವಂತೆ ಅಚ್ಚುಕಟ್ಟಾಗಿ ರೆಡಿಯಾಗಿ , ಬೆಲೆಬಾಳುವ ಸೀರೆ ಉಟ್ಟು ಮದುವೆ ಮನೆಗಳಿಗೆ ಸಂಬಂಧಿಕರಂತೆ ಎಂಟ್ರಿ ಕೊಡುತ್ತಿದ್ದಳು.
ಯಾರಿಗೂ ಅನುಮಾನ ಬಾರದಂತೆ ಎಲ್ಲರನ್ನೂ ಮಾತನಾಡಿಸಿ, ಮದುವೆ ಸಂಭ್ರಮದ ನಡುವೆ ಅತಿಥಿಗಳು ಇಟ್ಟಿದ್ದ ಚಿನ್ನಾಭರಣಗಳನ್ನು ತನ್ನ ಕೈಚಳಕದಿಂದ ಅವುಗಳನ್ನ ಕಳ್ಳತನ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಕಳ್ಳತನದ ನಂತರ ನಿರಾಳವಾಗಿ ಮದುವೆ ಊಟವನ್ನೂ ಮುಗಿಸಿ ಅಲ್ಲಿಂದ ಪರಾರಿಯಾಗುತ್ತಿದ್ದಳು. ಬಸವನಗುಡಿಯ ದ್ವಾರಕನಾಥ್ ಕಲ್ಯಾಣ ಮಂಟಪದಲ್ಲಿ ನಡೆದ ಕಳ್ಳತನದ ಬೆನ್ನತ್ತಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಈಕೆಯನ್ನು ಬಂಧಿಸಿದಾಗ ಈಕೆಯ ಹಿನ್ನೆಲೆ ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಈಕೆಯ ಮೇಲೆ ಬಸವನಗುಡಿ ಠಾಣೆಯಲ್ಲೇ ಮೂರು ಪ್ರಕರಣಗಳು ದಾಖಲಾಗಿವೆ.
ದಾವಣಗೆರೆಯಲ್ಲಿ ಶೇರು ಮಾರುಕಟ್ಟೆ ಹೆಸರಲ್ಲಿ 76 ಲಕ್ಷ ರೂಪಾಯಿ ವಂಚನೆ
ತಂತ್ರಜ್ಞಾನವನ್ನು ಬಳಸಿಕೊಂಡು ಜನರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕುವ ಸೈಬರ್ ವಂಚಕರ ಜಾಲ ದಾವಣಗೆರೆಯಲ್ಲಿ ಸಕ್ರಿಯವಾಗಿದೆ. ನಗರದ ವಿನಾಯಕ ಬಡಾವಣೆಯ ನಿವಾಸಿಯೊಬ್ಬರು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಆಸೆಗೆ ಬಿದ್ದು ಬರೋಬ್ಬರಿ 76.48 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಹೂಡಿಕೆಯ ಆಸೆ ತೋರಿಸಿದ್ದನು. ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲಿ ಕೋಟಿ ಕೋಟಿ ಲಾಭ ಗಳಿಸಬಹುದು, ಯಾವಾಗ ಬೇಕಿದ್ದರೂ ಹಣ ಹಿಂಪಡೆಯಬಹುದು ಎಂದು ನಂಬಿಸಿದ್ದನು. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ್ದರು.
ಕೊನೆಗೆ ಲಾಭದ ಹಣವಿರಲಿ, ತಾವು ಹೂಡಿಕೆ ಮಾಡಿದ ಅಸಲು ಹಣವನ್ನೂ ಹಿಂಪಡೆಯಲು ಸಾಧ್ಯವಾಗದಿದ್ದಾಗ ವಂಚನೆ ನಡೆದಿರುವುದು ದೃಢಪಟ್ಟಿದೆ. ಸದ್ಯ ದಾವಣಗೆರೆಯ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
