ರಾಜ್ಯಕ್ಕೆ ಮತ್ತೆ ಕೊರೊನಾ ಎಂಟ್ರಿ!: ಬೀದರ್‌ನ ಮಹಿಳೆಗೆ ಕೊರೊನಾ ಪಾಸಿಟಿವ್

ಬೀದರ್: ಕರುನಾಡಿಗೆ ಮತ್ತೆ ಮಹಾಮಾರಿ ಕೊರೊನಾ ಎಂಟ್ರಿ ಕೊಟ್ಟಿದೆ. ಬೀದರ್ ಜಿಲ್ಲೆಯ ಭಾಲ್ಕಿ ಮೂಲದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸ್ಯಾಂಪಲ್ ಪರೀಕ್ಷೆಯ ವೇಳೆ ಸೋಂಕು ದೃಢಪಟ್ಟ ಬಳಿಕ ಮಹಿಳೆಯನ್ನು ತಕ್ಷಣವೇ ಬೀದರ್ ಬ್ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೋಂಕು ದೃಢಪಟ್ಟ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದ್ದು, ಸೋಂಕಿತ ಮಹಿಳೆಯ ಟ್ರಾವೆಲ್ ಹಿಸ್ಟರಿ ಹಾಗೂ ಇತ್ತೀಚಿನ ದಿನಗಳಲ್ಲಿ ಅವರು ಯಾರ್ಯಾರನ್ನು ಸಂಪರ್ಕಿಸಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕುವ ಕಾರ್ಯ ಆರಂಭಿಸಿದೆ. ಮಹಿಳೆ ಭೇಟಿ ನೀಡಿರುವ ಸ್ಥಳಗಳು, ಪ್ರಯಾಣಿಸಿದ ಮಾರ್ಗಗಳು ಹಾಗೂ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಸೋಂಕಿತ ಮಹಿಳೆಯ ಕುಟುಂಬ ಸದಸ್ಯರು ಹಾಗೂ ಮನೆಯಲ್ಲಿದ್ದ ಎಲ್ಲರಿಗೂ ಕೋವಿಡ್ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಮಹಿಳೆ ಸಂಪರ್ಕದಲ್ಲಿದ್ದ ಸಂಬಂಧಿಕರು, ಸ್ನೇಹಿತರು ಮತ್ತು ಇತರರಿಗೆ ಕೂಡ ಪರೀಕ್ಷೆ ನಡೆಸುವ ಪ್ರಕ್ರಿಯೆ ಆರಂಭವಾಗಿದ್ದು, ಅಗತ್ಯವಿದ್ದರೆ ಅವರನ್ನು ಪ್ರತ್ಯೇಕ ನಿಗಾದಲ್ಲೂ ಇರಿಸಲಾಗುತ್ತದೆ.

ಬ್ರಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತೆಗೆ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ತಂಡ ಮಹಿಳೆಯ ಆರೋಗ್ಯದ ಮೇಲೆ ನಿರಂತರ ನಿಗಾ ವಹಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಂಕಿನ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಒಂದು ಪ್ರಕರಣದಿಂದ ಆತಂಕ ಪಡುವ ಅಗತ್ಯವಿಲ್ಲವಾದರೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಂತ ಮುಖ್ಯ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದ ತೊಂದರೆ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.

Exit mobile version