ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 1ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಈ ವೇಳೆ ಅವರಿಗೆ ವಿಶ್ವವಿಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ಸ್ವಾಮಿ ವಿವೇಕಾನಂದರ ವಿಶೇಷ ವೈಟ್ ಮಾರ್ಬಲ್ ಮೂರ್ತಿಯನ್ನು ಸ್ಮರಣಿಕೆಯಾಗಿ ನೀಡಲು ರಾಮಕೃಷ್ಣ ಆಶ್ರಮ ಸಿದ್ಧತೆ ನಡೆಸಿದೆ. ಅಪರೂಪದ ಕಲಾಕೌಶಲ್ಯದಿಂದ ರೂಪುಗೊಂಡಿರುವ ಈ ಮೂರ್ತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಪ್ರಧಾನಿ ಮೋದಿ ಅವರು ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ರಾಮಕೃಷ್ಣ ಆಶ್ರಮದ ಆವರಣದಲ್ಲಿ ನಿರ್ಮಾಣವಾಗಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಆಶ್ರಮದ ಆವರಣದಲ್ಲಿರುವ ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ವಿಶೇಷ ಸಂದರ್ಭದಲ್ಲಿ ರಾಮಕೃಷ್ಣ ಆಶ್ರಮದ ವತಿಯಿಂದ ಸುಮಾರು 8.5 ಕೆಜಿ ತೂಕದ ವೈಟ್ ಮಾರ್ಬಲ್‌ನಲ್ಲಿ ಕೆತ್ತಲಾದ 1.5 ಅಡಿ ಎತ್ತರದ ಏಕಶಿಲಾ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆಯಾಗಿ ನೀಡಲಾಗುತ್ತಿದೆ. ಈ ಕಲಾಕೃತಿಯನ್ನು ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತಿ ದೇಶಾದ್ಯಂತ ಖ್ಯಾತಿ ಪಡೆದಿರುವ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿದ್ದಾರೆ.
ಕಳೆದ 15 ದಿನಗಳಿಂದ ನಿರಂತರವಾಗಿ ಈ ಮೂರ್ತಿಯ ಕೆತ್ತನೆಯಲ್ಲಿ ತೊಡಗಿದ್ದ ಅರುಣ್ ಯೋಗಿರಾಜ್ ಅವರು ಗುರುವಾರ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿದ್ದಾರೆ. ವಿವೇಕಾನಂದರ ವ್ಯಕ್ತಿತ್ವ, ಧ್ಯಾನಮುದ್ರೆ ಹಾಗೂ ಆಧ್ಯಾತ್ಮಿಕ ತೇಜಸ್ಸನ್ನು ಅತ್ಯಂತ ನೈಜವಾಗಿ ಮೂಡಿಸಿರುವ ಈ ಮೂರ್ತಿ ಎಲ್ಲರ ಗಮನ ಸೆಳೆಯುವಂತಿದೆ.
ಇತ್ತ ಪ್ರಧಾನಿ ಮೋದಿ ಅವರ ಆಗಮನದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜುಗೊಳ್ಳುತ್ತಿದೆ. ಪ್ರಧಾನಿ ಸಂಚರಿಸುವ ಪ್ರಮುಖ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದ್ದು, ನಗರ ಪಾಲಿಕೆ ವತಿಯಿಂದ ಸ್ವಚ್ಛತಾ ಕಾರ್ಯವನ್ನು ವೇಗವಾಗಿ ನಡೆಸಲಾಗುತ್ತಿದೆ. ರಸ್ತೆ ಬದಿಯ ಅಲಂಕಾರ, ಭದ್ರತಾ ವ್ಯವಸ್ಥೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಸುಧಾರಣೆಯ ಕೆಲಸಗಳು ಭರದಿಂದ ಸಾಗುತ್ತಿವೆ.
ಭದ್ರತಾ ದೃಷ್ಟಿಯಿಂದ ವಿಶೇಷ ರಕ್ಷಣಾ ಪಡೆ (SPG) ಅಧಿಕಾರಿಗಳು ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಪ್ರಧಾನಿ ಸಂಚರಿಸುವ ಮಾರ್ಗವನ್ನು ಹಲವು ಬಾರಿ ಪರಿಶೀಲಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಕೆಲವೊಂದು ಸಮಯ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪೊಲೀಸರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ (ಕ್ರಾಫೆಟ್) ಭವನದ ಮುಂಭಾಗದ ಓವಲ್ ಮೈದಾನಕ್ಕೆ ತಲುಪಲಿದ್ದು, ನಂತರ ರಸ್ತೆ ಮಾರ್ಗದ ಮೂಲಕ ರಾಮಕೃಷ್ಣ ಆಶ್ರಮಕ್ಕೆ ತೆರಳಿ ವಿವೇಕ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನಿ ಅವರ ಈ ಭೇಟಿಯಿಂದ ಮೈಸೂರಿನಲ್ಲಿ ಭದ್ರತೆ, ಸಂಚಾರ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸಿದ್ಧತೆಗಳು ಅಂತಿಮ ಹಂತ ತಲುಪಿವೆ.
