ಸಂಪುಟ ವಿಸ್ತರಣೆಗೆ ಇಂದೇ ಗ್ರೀನ್‌ ಸಿಗ್ನಲ್‌..?: ರಾಜ್ಯ ನಾಯಕರ ಕೈಗೆ ಸಿಗದ ರಾಹುಲ್ ಗಾಂಧಿ

ಮುನ್ಸೂಚನೆ (18)

ಬೆಂಗಳೂರು, ಜುಲೈ 30: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಯ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆಯೇ ಹೊರತು ಅಂತಿಮ ತೀರ್ಮಾನಕ್ಕೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಖಾಲಿ ಇರುವ 20 ಸಚಿವ ಸ್ಥಾನಗಳ ಭರ್ತಿಗೆ ಹೈಕಮಾಂಡ್ ಸಮ್ಮತಿ ಪಡೆಯಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸುತ್ತಿದ್ದರೂ, ಅಂತಿಮ ನಿರ್ಧಾರ ಇನ್ನೂ ಹೊರಬಿದ್ದಿಲ್ಲ. ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಅಂತಿಮ ಒಪ್ಪಿಗೆ ನೀಡಬೇಕಿರುವ ಹಿನ್ನೆಲೆ ರಾಜ್ಯ ನಾಯಕರು ಅವರ ಭೇಟಿಗಾಗಿ ಕಾದು ಕುಳಿತಿದ್ದಾರೆ.

ರಾಜ್ಯದಲ್ಲಿ ಇನ್ನೂ 20 ಸಚಿವ ಸ್ಥಾನಗಳು ಖಾಲಿ ಇದ್ದು, ಅವುಗಳ ಭರ್ತಿಗಾಗಿ 35ಕ್ಕೂ ಹೆಚ್ಚು ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದಾರೆ.

ಮೂರು ಪಟ್ಟಿಗಳಿಂದ ಹೆಚ್ಚಿದ ಗೊಂದಲ

ಸಂಪುಟ ವಿಸ್ತರಣೆಯ ವಿಚಾರದಲ್ಲಿ ಮೂರು ಪ್ರತ್ಯೇಕ ಪಟ್ಟಿಗಳು ಸಿದ್ಧವಾಗಿರುವುದೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮದೇ ಆದ ಶಿಫಾರಸು ಪಟ್ಟಿಯನ್ನು ಸಿದ್ಧಪಡಿಸಿದ್ದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಪಟ್ಟಿಯನ್ನು ನೀಡಿದ್ದಾರೆ. ಇದರ ಜೊತೆಗೆ ಎಐಸಿಸಿ ಹೈಕಮಾಂಡ್ ಕೂಡ ತನ್ನದೇ ಆದ ಮೂರನೇ ಪಟ್ಟಿಯನ್ನು ಇಟ್ಟುಕೊಂಡಿದೆ.

ಈ ಮೂರು ಪಟ್ಟಿಗಳಲ್ಲಿರುವ ಹೆಸರುಗಳನ್ನು ಪರಿಶೀಲಿಸಿ, ಪ್ರಾದೇಶಿಕ, ಜಾತಿ ಹಾಗೂ ರಾಜಕೀಯ ಸಮತೋಲನ ಕಾಪಾಡುವ ಜೊತೆಗೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಜವಾಬ್ದಾರಿ ಹೈಕಮಾಂಡ್ ಮೇಲಿದೆ. ಇದೇ ಕಾರಣದಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.

ರಾಹುಲ್ ಗಾಂಧಿ ಭೇಟಿಗೆ ಇನ್ನೂ ಅವಕಾಶ ಸಿಕ್ಕಿಲ್ಲ

ದೆಹಲಿ ಪ್ರವಾಸದ ವೇಳೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ, ದೇಶಾದ್ಯಂತ ನಡೆಯುತ್ತಿರುವ ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ಪ್ರತಿಭಟನೆಗಳಲ್ಲಿ ರಾಹುಲ್ ಗಾಂಧಿ ನಿರತರಾಗಿರುವುದರಿಂದ ರಾಜ್ಯ ನಾಯಕರಿಗೆ ಅವರ ಭೇಟಿಗೆ ಸಮಯ ಸಿಕ್ಕಿಲ್ಲ.

ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮತ್ತೊಂದು ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ಹಾಗೂ ರಾಹುಲ್ ಗಾಂಧಿ ಭಾಗವಹಿಸುವ ನಿರೀಕ್ಷೆಯಿದ್ದು, ಸಚಿವರ ಅಂತಿಮ ಪಟ್ಟಿಗೆ ಇದೇ ಸಭೆಯಲ್ಲಿ ಮುದ್ರೆ ಬೀಳಬಹುದು ಎಂಬ ವಿಶ್ವಾಸ ಕಾಂಗ್ರೆಸ್ ವಲಯದಲ್ಲಿದೆ.

ಬೆಂಗಳೂರಿನಲ್ಲಿ ಪ್ರಮಾಣವಚನಕ್ಕೆ ಸಿದ್ಧತೆ

ದೆಹಲಿ ಮಟ್ಟದಲ್ಲಿ ತೀರ್ಮಾನ ಬಾಕಿ ಇದ್ದರೂ, ಬೆಂಗಳೂರಿನಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಸರ್ಕಾರ ಸಕಲ ಸಿದ್ಧತೆ ನಡೆಸುತ್ತಿದೆ. ಲೋಕಭವನದಲ್ಲಿ ಶುಕ್ರವಾರ ಮಧ್ಯಾಹ್ನ 12.30ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಬೃಹತ್ ಶಾಮಿಯಾನ, ಆಸನ ವ್ಯವಸ್ಥೆ ಹಾಗೂ ಭದ್ರತಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದು, ಸಂಬಂಧಪಟ್ಟ ಇಲಾಖೆಗಳಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಅಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ಸಿದ್ಧರಾಗುವಂತೆ ಮಾಹಿತಿ ರವಾನಿಸಿದೆ.

Exit mobile version