ಬೆಂಗಳೂರು, ಜುಲೈ 30: ಕಾವೇರಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ನೀಡಿರುವ ನಿರ್ದೇಶನ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿರುವ ಹಿನ್ನೆಲೆ, ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು ಎಂದು ಕನ್ನಡಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ.
ಬೆಂಗಳೂರಿನಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಕಾವೇರಿ ನೀರನ್ನು ಬಿಡುಗಡೆ ಮಾಡುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿವೆ. ರಾಜ್ಯದ ಜನರ ಕುಡಿಯುವ ನೀರಿನ ಅವಶ್ಯಕತೆಯೇ ಮೊದಲ ಆದ್ಯತೆಯಾಗಬೇಕು ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡರೆ ರಾಜ್ಯಾದ್ಯಂತ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಜುಲೈ 31ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಕನ್ನಡಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಮುಖಂಡರ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಬಂದ್ ದಿನಾಂಕ, ಹೋರಾಟದ ರೂಪುರೇಷೆ ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧಾರವಾಗುವ ಸಾಧ್ಯತೆ ಇದೆ.
ಇನ್ನೊಂದೆಡೆ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸಂಘಟನೆಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಆತಂಕಕಾರಿ ಮಟ್ಟಕ್ಕೆ ಇಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಜನರಿಗೆ ಕುಡಿಯಲು ಮತ್ತು ಕೃಷಿಗೆ ಬೇಕಾದಷ್ಟು ನೀರು ಲಭ್ಯವಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ 4.5 ಟಿಎಂಸಿ ನೀರು ಬಿಡುವಂತೆ ಸೂಚಿಸಿರುವುದು ವಾಸ್ತವ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ವೈಜ್ಞಾನಿಕ ಮಾಹಿತಿ, ಮಳೆ ಪ್ರಮಾಣ, ಜಲಾಶಯಗಳ ಸಂಗ್ರಹ ಹಾಗೂ ಕುಡಿಯುವ ನೀರಿನ ಅಗತ್ಯಗಳ ಬಗ್ಗೆ ಸಮಗ್ರ ಅಂಕಿ-ಅಂಶಗಳನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು.
ಅಗತ್ಯವಿದ್ದರೆ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಲು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು ಎಂದು ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ. ಕಾವೇರಿ ವಿಚಾರದಲ್ಲಿ ಯಾವುದೇ ರಾಜಕೀಯಕ್ಕಿಂತ ರಾಜ್ಯದ ಹಕ್ಕು ಮುಖ್ಯವಾಗಿದ್ದು, ಸರ್ಕಾರ ದೃಢ ನಿಲುವು ತಾಳಬೇಕು ಎಂಬುದು ಸಂಘಟನೆಗಳ ಒತ್ತಾಯವಾಗಿದೆ.
ಇದರ ನಡುವೆ, ಕಾವೇರಿ ನಿಯಂತ್ರಣ ಸಮಿತಿಯ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇಂದು ದೆಹಲಿಯಲ್ಲಿ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮಧ್ಯಾಹ್ನ 2.30 ಗಂಟೆಗೆ ನಡೆಯಲಿರುವ ಈ ಸಭೆಯಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಭಾಗವಹಿಸಲಿದ್ದಾರೆ.
