ರಾಜೀನಾಮೆ ಕೊಡೋದು ಫಿಕ್ಸ್: ನಾಳೆ ಮಾತಾಡ್ತೀನಿ ಎಂದ ಸಿದ್ದರಾಮಯ್ಯ

Untitled design 2026 05 27T125747.171

ಬೆಂಗಳೂರು, ಮೇ 27: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರದ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ತಮ್ಮ ರಾಜೀನಾಮೆ ಕುರಿತಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಯಾವುದೇ ಸ್ಪಷ್ಟ ಉತ್ತರ ನೀಡದೇ, “ಎಲ್ಲದರ ಬಗ್ಗೆ ನಾಳೆ ಮಾತಾಡ್ತೀನಿ” ಎಂದು ಹೇಳಿ ತೆರಳಿದ್ದಾರೆ.

ಮಾಜಿ ಪ್ರಧಾನಿ ಜವಹರಲಾಲ್ ನೆಹರು (Jawaharlal Nehru) ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ನೆಹರೂ ಅವರ ಕುರಿತು ಮಾತನಾಡಿದ ಸಿಎಂ, “ಆಧುನಿಕ ಭಾರತದ ನಿರ್ಮಾಣದಲ್ಲಿ ಜವಾಹರಲಾಲ್ ನೆಹರೂ ಅವರ ಪಾತ್ರ ಬಹಳ ದೊಡ್ಡದು. ದೇಶದ ಮೊದಲ ಪ್ರಧಾನಿಯಾಗಿ ಅವರು ಅನೇಕ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಸ್ವಾತಂತ್ರ್ಯಾನಂತರ ದೇಶ ಕಟ್ಟುವ ಕಾರ್ಯದಲ್ಲಿ ಅವರು ಮಹತ್ತರ ಕೊಡುಗೆ ನೀಡಿದ್ದಾರೆ” ಎಂದು ಸ್ಮರಿಸಿದರು.

ಆದರೆ, ನಂತರ ಪತ್ರಕರ್ತರು ಕೇಳಿದ ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ಸಿಎಂ ಯಾವುದೇ ಉತ್ತರ ನೀಡಲಿಲ್ಲ. “ನಾಳೆ ಮಾತಾಡ್ತೀನಿ” ಎಂಬ ಒಂದೇ ಮಾತು ಹೇಳಿ ಕಾರ್ಯಕ್ರಮ ಸ್ಥಳದಿಂದ ನಿರ್ಗಮಿಸಿದರು. ಇದರಿಂದ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಬಹುತೇಕ ಖಚಿತ ಎನ್ನುವ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.

ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿವೆ. ಹೈಕಮಾಂಡ್ ಮಟ್ಟದಲ್ಲಿ ಮಹತ್ವದ ಚರ್ಚೆಗಳು ನಡೆದಿವೆ ಎನ್ನಲಾಗುತ್ತಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಸಾಧ್ಯತೆಗಳ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲೂ ನಾಳೆ  ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಸುದ್ದಿಗೋಷ್ಠಿಯ ಬಳಿಕವೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ.

 

Exit mobile version