ಖರ್ಗೆ-ಸಿದ್ದು ಹೈವೋಲ್ಟೇಜ್ ಮೀಟಿಂಗ್: ಸಭೆಯ ಬಳಿಕ ಸಿದ್ದರಾಮಯ್ಯ ಏನಂದ್ರು..?

Untitled design (56)

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಈಗಲೂ ಶಾಂತಿ ಸಂಪೂರ್ಣವಾಗಿ ನೆಲೆಸಿಲ್ಲ. ಶನಿವಾರ (ನವೆಂಬರ್ 22, 2025) ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಗೌಪ್ಯ ಸಭೆ ನಡೆದಿದೆ. ಈ ಭೇಟಿಯನ್ನು ಸಿಎಂ ಸಿದ್ದರಾಮಯ್ಯ ಕೇವಲ ಸೌಹಾರ್ದಯುತ ಭೇಟಿ ಎಂದು ಬಣ್ಣಿಸಿದ್ದರೂ, ಪಕ್ಷದ ಆಂತರಿಕ ಮೂಲಗಳು ಹೇಳುವುದೇ ಬೇರೆಯಾಗಿದೆ.

ಸಭೆಯಲ್ಲಿ ನಾಯಕತ್ವ ಬದಲಾವಣೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೇಡಿಕೆಗಳು, ಸಂಪುಟ ಪುನಾರಚನೆ ಹಾಗೂ ಪಕ್ಷದ ಒಳಗಿನ ಗುಂಪುಗಳ ಬಗ್ಗೆ ತೀವ್ರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ. ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಪಕ್ಷದ ಆಂತರಿಕ ಜಗಳ ಪಕ್ಷಕ್ಕೆ ಒಳ್ಳೆಯದಲ್ಲ. ಇದು ಸರ್ಕಾರದ ಇಮೇಜ್‌ಗೂ ಧಕ್ಕೆ ತರುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸಂಪುಟ ಪುನಾರಚನೆ ಬಗ್ಗೆಯೂ ಯಾವುದೇ ಚರ್ಚೆ ಆಗಿಲ್ಲ. ಕೇವಲ ಸೌಹಾರ್ದಯುತ ಭೇಟಿ. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಒಪ್ಪುತ್ತೇನೆ, ಡಿಕೆಶಿಯೂ ಒಪ್ಪಬೇಕು ಎಂದು ಸ್ಪಷ್ಟಪಡಿಸಿದರು.

ಪಕ್ಷದ ಆಂತರಿಕ ಮೂಲಗಳ ಪ್ರಕಾರ, ಖರ್ಗೆ ಅವರು ಸಿದ್ದರಾಮಯ್ಯ ಅವರನ್ನು ನನ್ನ ವಿರುದ್ಧ ಗಂಭೀರ ಆರೋಪಗಳಿಲ್ಲ. ಆದರೆ ಪಕ್ಷದ ಒಳಗಿನ ಆಂತರೀಕ ಜಗಳ ಸ್ಥಳೀಯ ಚುನಾವಣೆಯ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಇದನ್ನು ತಕ್ಷಣ ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಮುಂದಿನ ವಾರ ನಾನು ದೆಹಲಿಗೆ ಬರುತ್ತೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರೊಂದಿಗೆ ಎಲ್ಲ ವಿಷಯಗಳನ್ನೂ ಚರ್ಚಿಸುತ್ತೇನೆ. ನನ್ನ ಹಾಗೂ ಡಿಕೆಶಿ ನಡುವೆ ಯಾವುದೇ ಮನಸ್ತಾಪ ಇಲ್ಲ. ಆದರೆ ಕೆಲವರು ಬೇಕೆಂದೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ಮುಂದೆ ಇಡುತ್ತೇನೆ ಎಂದು ಭರವಸೆ ನೀಡಿದ್ದಾರೆ .

ಈ ಭೇಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಡಿ.ಕೆ. ಶಿವಕುಮಾರ್ ಪಂಗಡವು ಸಿದ್ದರಾಮಯ್ಯ ಅವರ ವಿರುದ್ಧ ದೆಹಲಿಯಲ್ಲಿ ಮೀಟಿಂಗ್‌ ಮಾಡುತ್ತಿದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಸಿದ್ದು ಬೆಂಬಲಿಗರೊಬ್ಬರು “2028ರ ಚುನಾವಣೆಯಲ್ಲೂ ಸಿದ್ದು ಸಿಎಂ ಅಭ್ಯರ್ಥಿ” ಎಂದು ಹೇಳಿಕೆ ನೀಡಿದ್ದು, ಡಿಕೆಶಿ ಬಣಕ್ಕೆ ಆಘಾತವಾಗಿತ್ತು.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ (ಜಿಲ್ಲಾ-ತಾಲೂಕು ಪಂಚಾಯಿತಿ) ಡಿಸೆಂಬರ್-ಜನವರಿಯಲ್ಲಿ ನಡೆಯುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಪಕ್ಷದ ಒಳಗಿನ ಗುಂಪುಗಳು ತೀವ್ರ ಪರಿಣಾಮ ಬೀರಬಹುದು. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂಬ ಸಂದೇಶವನ್ನು ಖರ್ಗೆ ರವಾನಿಸಿದ್ದಾರೆ.

ಈಗ ಕಾಂಗ್ರೆಸ್‌ನಲ್ಲಿ ಎಲ್ಲರ ದೃಷ್ಟಿ ಸಿದ್ದರಾಮಯ್ಯ ಅವರ ಮುಂದಿನ ದೆಹಲಿ ಪ್ರವಾಸದ ಮೇಲಿದೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ನಡೆಯುವ ಸಭೆಯಲ್ಲಿ ಏನು ನಿರ್ಧಾರವಾಗುತ್ತದೆ. ಆ ಭೇಟಿ ಕರ್ನಾಟಕ ಕಾಂಗ್ರೆಸ್‌ನ ಭವಿಷ್ಯವನ್ನೇ ನಿರ್ಧರಿಸಬಹುದಾಗಿದೆ ಹೀಗಾಗಿ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

Exit mobile version