ಅತ್ತೆ ಕಾಟ ತಾಳಲಾಗದೇ 3 ಮಕ್ಕಳನ್ನ ನೇ*ಣಿಗೆ ಹಾಕಿ, ತಾನು ಡೀಸೆಲ್ ಕುಡಿದ ತಾಯಿ..!

Untitled design 2026 02 01T181724.889

ಬಾಗಲಕೋಟೆ (ಫೆ.01):  ಅತ್ತೆಯ ಮಾನಸಿಕ ಹಿಂಸೆಯಿಂದ ಬೇಸತ್ತ ತಾಯಿಯೊಬ್ಬಳು ತನ್ನ ಮೂವರು ಹಸುಗೂಸುಗಳನ್ನ ನೇಣು ಬಿಗಿದು ಕೊಲೆ ಮಾಡಿ, ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ನಡೆದಿದೆ.

ಏನಿದು ಘಟನೆ ?

ಹಿರೇಮುಚ್ಚಳಗುಡ್ಡ ಗ್ರಾಮದ ನಿವಾಸಿ ರೂಪಾ ಹನುಮಂತಗೌಡರ (27) ಆರೋಪಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮನೆಯಲ್ಲಿ ನಡೆಯುತ್ತಿದ್ದ ಅತ್ತೆ-ಸೊಸೆಯ ಕಿತ್ತಾಟ ತಾರಕಕ್ಕೇರಿತ್ತು. ಇದರಿಂದ ತೀವ್ರ ನೊಂದಿದ್ದ ರೂಪ, ಮಕ್ಕಳಾದ ಸಮೃದ್ಧಿ (5), ಪ್ರೀತಮ್ (4) ಮತ್ತು 2 ವರ್ಷದ ಸುಕ್ಷಿತ್‌ನನ್ನು ಮನೆಯ ಜಂತಿಗೆ ನೇಣು ಹಾಕಿದ್ದಲೆ. ಮಕ್ಕಳು ಸತ್ತ ಬಳಿಕ ತಾನು ಸಹ ಡೀಸೆಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅತ್ತೆಯ ಕಿರುಕುಳದ ಆರೋಪ

2018ರಲ್ಲಿ ಹನುಮಂತ ಗೌಡರ ಎಂಬುವವರ ಜೊತೆ ರೂಪಾ ಅವರ ವಿವಾಹವಾಗಿತ್ತು. ಹನುಮಂತ ಅವರು ಬಾದಾಮಿಯ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಮದುವೆಯಾದ ಆರಂಭದ ದಿನಗಳಿಂದಲೂ ಅತ್ತೆ ರೇಣವ್ವ ಮತ್ತು ಸೊಸೆ ರೂಪಾ ನಡುವೆ ಹೊಂದಾಣಿಕೆ ಇರಲಿಲ್ಲ. ಅತ್ತೆಯ ಮಾನಸಿಕ ಹಿಂಸೆ ಮತ್ತು ನಿರಂತರ ಕಿರುಕುಳದಿಂದ ರೂಪಾ ತೀವ್ರ  ನೊಂದಿದ್ದರು.ಘಟನೆ ನಡೆದ ದಿನದಂದು ಜಗಳ ಮಿತಿಮೀರಿದ ಕಾರಣ, ತನ್ನ ಮಕ್ಕಳ ಭವಿಷ್ಯದ ಬಗ್ಗೆ ಹತಾಶೆಗೊಂಡು ಈ ಕೃತ್ಯವೆಸಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಸದ್ಯ ರೂಪಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದ್ದು, ಅತ್ತೆ ರೇಣವ್ವ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆಸ್ಪತ್ರೆಯಲ್ಲಿರುವ ತಾಯಿಯ ಹೇಳಿಕೆಯನ್ನು ಪಡೆದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version