ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಹೋರಾಟ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವಿನ ಶೀತಲ ಸಮರ ಇದೀಗ ಮತ್ತೊಂದು ಅಚ್ಚರಿಯ ಬೆಳವಣಿಗೆಯಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ 20ಕ್ಕೂ ಹೆಚ್ಚು ಹರಿದ್ವಾರದ ನಾಗಸಾಧುಗಳು ದಿಢೀರ್ ಭೇಟಿ ನೀಡಿ ಉಪಮುಖ್ಯಮಂತ್ರಿಗೆ ಆಶೀರ್ವಾಸಿದ್ದಾರೆ.
ಇತ್ತೀಚೆಗೆ ಕಾಶಿಯಿಂದ ಆಗಮಿಸಿದ್ದ ನಾಗಸಾಧುಗಳು ಡಿಕೆಶಿ ಮುಖ್ಯಮಂತ್ರಿ ಆಗಲೆಂದು ಆಶೀರ್ವಾದ ಮಾಡಿದ್ದರು ಎಂಬ ಸುದ್ದಿ ಇನ್ನೂ ತಣ್ಣಗಾಗುವ ಮೊದಲೇ, ಇದೀಗ ಹರಿದ್ವಾರದಿಂದ ಬಂದ ನಾಗಸಾಧುಗಳ ತಂಡ ಡಿಕೆಶಿ ಮನೆಗೆ ಭೇಟಿ ನೀಡಿರುವುದು ವಿಶೇಷ. ಸಿಎಂ ಕುರ್ಚಿ ಕುರಿತ ಕಾಂಗ್ರೆಸ್ ಒಳರಾಜಕಾರಣ ತೀವ್ರಗೊಂಡಿರುವ ಹೊತ್ತಿನಲ್ಲಿ ಈ ಭೇಟಿ ಹಲವು ಕುತೂಹಲ ಮೂಡಿಸಿದೆ.
ನಾಗಸಾಧುಗಳ ಆಶೀರ್ವಾದದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಭೇಟಿಗೆ ಯಾವುದೇ ರಾಜಕೀಯ ಅರ್ಥ ಕಲ್ಪಿಸಬಾರದು ಎಂದು ಸ್ಪಷ್ಟಪಡಿಸಿದರು. “ಅವರು ನನ್ನ ಮನೆಯ ಬಾಗಿಲಿಗೆ ಬಂದಿದ್ದರು. ಬಂದವರನ್ನು ಹೋಗಿ ಎಂದು ಹೇಳಲು ಆಗುವುದಿಲ್ಲ. ಅವರು ಬಂದು ಆಶೀರ್ವಾದ ಮಾಡಿದರು, ನಾನು ಸ್ವೀಕರಿಸಿದೆ. ಮನೆಗೆ ಬಂದ ಅತಿಥಿಗಳನ್ನು ಹಾಗೆಯೇ ಕಳುಹಿಸಲು ಸಾಧ್ಯವಿಲ್ಲ” ಎಂದು ಡಿಕೆಶಿ ಹೇಳಿದರು.
ಈ ನಡುವೆ ಡಿಕೆಶಿ ತಮ್ಮ ಮುಂದಿನ ದೆಹಲಿ ಪ್ರವಾಸದ ಕುರಿತೂ ಮಾಹಿತಿ ನೀಡಿದರು. “ಮಂಗಳವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ಜಲಮಂಡಳಿಯಿಂದ ಸಂಬಂಧಿಸಿದ ಕೆಲವು ಕೆಲಸಗಳಿವೆ. ಮೇಕೆದಾಟು ಯೋಜನೆ ಕುರಿತೂ ಚರ್ಚೆ ನಡೆಯಲಿದೆ. ಇಲಾಖೆಯ ಕೆಲಸಗಳ ಬಗ್ಗೆ ಮಾತುಕತೆ ನಡೆಸಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ಹೇಳಿದರು. ದೆಹಲಿಯಲ್ಲಿ ಹೈಕಮಾಮಂಡ್ ಭೇಟಿ ವಿಚಾರ ಕುರಿತು ಮಾತನಾಡಿದ ಅವರು,“ಹೈಕಮಾಂಡ್ ಭೇಟಿ ಇದ್ದರೆ ನಿಮಗೆ ಹೇಳಿಯೇ ಹೋಗುತ್ತೇನೆ. ನಿಮಗೆ ಹೇಳದೆ ನಾನು ಹೋಗಲ್ಲ” ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಇನ್ನೊಂದೆಡೆ, ಕೇಂದ್ರ ಸರ್ಕಾರ ನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವ ವಿಚಾರದ ಕುರಿತು ಡಿಕೆಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಅವರು ಬೇಕಾದರೆ ನೋಟಿನ ಮೇಲಿರುವ ಫೋಟೋ ತೆಗೆಯಲಿ. ಆದರೆ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತೆಗೆದುಹಾಕುವುದು ದೊಡ್ಡ ಅನ್ಯಾಯ. ಇದು ಕೇಂದ್ರ ಸರ್ಕಾರ ಮಾಡಿದ ಭಾರಿ ತಪ್ಪು. ಇದಕ್ಕೆ ಜನರೇ ಉತ್ತರ ನೀಡುತ್ತಾರೆ” ಎಂದು ಕಿಡಿಕಾರಿದರು.
