ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕೇಳಿಬಂದಿದ್ದ ಕುರ್ಚಿ ವಿವಾದದ ಊಹಾಪೋಹಗಳಿಗೆ ಮಂಗಳವಾರ ಬೆಳಗ್ಗೆ ಪೂರ್ಣವಿರಾಮ ಬಿದ್ದಂತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡಿಕೆಶಿ ಅವರ ಸದಾಶಿವನಗರದ ನಿವಾಸದಲ್ಲಿ ಉಪಹಾರ ಕೂಟ ನಡೆಸಿಕೊಂಡು, ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ಉಪಹಾರದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ನಾವು ಒಂದೇ ಪಕ್ಷದಲ್ಲಿದ್ದೇವೆ, ಒಂದೇ ಸಿದ್ಧಾಂತವನ್ನು ನಂಬಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೈಕಮಾಂಡ್ ಹೇಳಿದ್ದಕ್ಕೆ ಇಬ್ಬರೂ ಸಂಪೂರ್ಣ ಬದ್ಧರಾಗಿದ್ದೇವೆ. ನಾವು ಒಡಹುಟ್ಟಿದವರಂತೆ ನಡೆಯುತ್ತಿದ್ದೇವೆ, ಮುಂದೆಯೂ ಅದೇ ರೀತಿ ನಡೆಯುತ್ತೇವೆ” ಎಂದು ಸ್ಪಷ್ಟಪಡಿಸಿದರು.
ನಾಳೆ (ಬುಧವಾರ) ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಬ್ಬರೂ ಮತ್ತೊಮ್ಮೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಆಗಮಿಸುತ್ತಿದ್ದಾರೆ. “ಅಲ್ಲಿ ಮತ್ತೊಮ್ಮೆ ಚರ್ಚೆ ನಡೆಸುತ್ತೇವೆ. ರಾಜ್ಯ ಕಾಂಗ್ರೆಸ್‌ನ ಎಲ್ಲ ವಿಚಾರಗಳನ್ನೂ ಒಮ್ಮೆಲೇ ಪರಿಶೀಲಿಸುತ್ತೇವೆ” ಎಂದು ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಉಪಹಾರ ಬಗ್ಗೆ ಸಿಎಂ ಹಾಸ್ಯದಿಂದ ಉತ್ತರಿಸಿದ್ದು, “ಅವರು (ಡಿಕೆಶಿ) ಸಂಪೂರ್ಣ ಸಸ್ಯಾಹಾರಿ. ಹಾಗಾಗಿ ನಾನು ಮನೆಯಲ್ಲಿ ವೆಜ್ ತಿಂಡಿಗಳನ್ನೇ ಮಾಡಿಸಿದ್ದೆ. ನಾನು ಮಾತ್ರ ಮಾಂಸಾಹಾರಿ, ಆದ್ದರಿಂದ ಇಂದು ಅವರು ನಾಟಿಕೋಳಿ ಬಿರ್ಯಾನಿ, ಮಟನ್ ಚಾಪ್ ಮಾಡಿಸಿದ್ದರು ಎಂದು ನಗುತ್ತಾ ಹೇಳಿದರು.
ಡಿಕೆ ಶಿವಕುಮಾರ್ ಒಗ್ಗಟ್ಟಿನ ಮಂತ್ರ
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, “ಮೊದಲು ನಾನೇ ಸಿಎಂ ಅವರನ್ನು ಕರೆದಿದ್ದೆ. ಆದರೆ ಮೊದಲ ಉಪಹಾರ ಸಭೆ ಅವರ ಮನೆಯಲ್ಲೇ ನಡೆಯಿತು. ಇಂದು ನನ್ನ ಮನೆಯಲ್ಲಿ ನಡೆಯಿತು. ನಾಳೆ ಸುರ್ಜೇವಾಲಾ ಅವರನ್ನೂ ಭೇಟಿಯಾಗಲು ಅವಕಾಶ ಕೇಳಿದ್ದೇವೆ. ಮುಂಬರುವ ಅಧಿವೇಶನ, ಸರ್ಕಾರದ ಕಾರ್ಯಕ್ರಮಗಳು, ಪಕ್ಷ ಸಂಘಟನೆ ಎಲ್ಲವನ್ನೂ ಚರ್ಚಿಸಿದ್ದೇವೆ. ಶಾಸಕರಿಗೆ ಈ ಒಗ್ಗಟ್ಟಿನ ಸಂದೇಶ ತಲುಪಿಸುತ್ತೇವೆ” ಎಂದರು.
“ನಮ್ಮದು ಒಂದೇ ಗುರಿ, ಒಂದೇ ಆಚಾರ-ವಿಚಾರ. ಯಾರು ಏನೇ ಹೇಳಿದರೂ ನಾವು ಒಟ್ಟಾಗಿ ಎದುರಿಸುತ್ತೇವೆ. ಕಾಂಗ್ರೆಸ್ ಪಕ್ಷ ಒಡೆಯುವುದಿಲ್ಲ, ಒಡೆಯಲು ಬಿಡುವುದೂ ಇಲ್ಲ” ಎಂದು ಡಿಕೆಶಿ ಹೇಳಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ಆರ್.ವಿ. ದೇವರಾಜ್ ಅವರಿಗೆ ಇಬ್ಬರೂ ಗೌರವ ಸಲ್ಲಿಸಿದರು. “ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಯಾವ ಕಾಂಗ್ರೆಸ್ ಕಾರ್ಯಕ್ರಮ ಇದ್ದರೂ ಮಾರ್ಕೆಟ್‌ನಿಂದ ತಾವೇ ಹೂವು ತಂದುಕೊಡುತ್ತಿದ್ದರು. ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ನಷ್ಟ” ಎಂದು ಸಿದ್ದರಾಮಯ್ಯ ಭಾವುಕರಾದರು.
