ಜಾತಿ ಗಣತಿ ಬಗ್ಗೆ ಇಂದು ಮಹತ್ವದ ಸಚಿವ ಸಂಪುಟ ಸಭೆ

Untitled design 2025 04 17t082207.440

ಬೆಂಗಳೂರು: ಜಾತಿ ಗಣತಿ ವರದಿ ಕುರಿತು ಇಂದು ಸಂಜೆ 4 ಗಂಟೆಗೆ ಮಹತ್ವದ ಸಂಪುಟ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಜಾತಿ ವರದಿ ಜಾರಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇದ್ದು, ರಾಜ್ಯದ ಜನತೆ ಈ ಬಗ್ಗೆ ತೀವ್ರ ನಿರೀಕ್ಷೆ ಇಟ್ಟಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ನೇತೃತ್ವದಲ್ಲಿ ನಡೆದಿದ್ದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಆಧಾರದಲ್ಲಿ, ಜಯಪ್ರಕಾಶ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ವರದಿಯನ್ನು 2024ರ ಫೆಬ್ರವರಿಯಲ್ಲಿ ಸಲ್ಲಿಸಿತ್ತು. ಈ ವರದಿಯ ಅನ್ವಯ ಇದೀಗ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು 32%ರಿಂದ 51%ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸುತ್ತಿವೆ.

ವಿವಿಧ ಸಮುದಾಯಗಳ ಜನಸಂಖ್ಯೆ ವಿವರಗಳು

ಆಯೋಗದ ಸಮೀಕ್ಷೆಯ ಪ್ರಕಾರ, ಮುಸ್ಲಿಮರು ಮತ್ತು ಉಪಪಂಗಡಗಳು – 76.99 ಲಕ್ಷ, ವೀರಶೈವ ಲಿಂಗಾಯತರು – 66.35 ಲಕ್ಷ, ಒಕ್ಕಲಿಗರು – 61 ಲಕ್ಷ, ಕುರುಬರು – 43.72 ಲಕ್ಷ, ಈಡಿಗರು – 14.12 ಲಕ್ಷ, ಬ್ರಾಹ್ಮಣರು – 15 ಲಕ್ಷ, ಮತ್ತು ಬಲಿಜ ಸಮುದಾಯ – 10.41 ಲಕ್ಷ ಜನಸಂಖ್ಯೆ ಹೊಂದಿದ್ದಾರೆ.

ಪ್ರವರ್ಗವಾರು ಹಂಚಿಕೆಯಲ್ಲಿ, 5.98 ಕೋಟಿ ಜನಸಂಖ್ಯೆಯಲ್ಲಿ 4.16 ಕೋಟಿ ಜನ ವಿವಿಧ ಹಿಂದುಳಿದ ವರ್ಗಗಳಿಗೆ ಸೇರಿದವರು. ಇದರೊಳಗೆ ಪ್ರವರ್ಗ-1ಎ: 34.96 ಲಕ್ಷ, 1ಬಿ: 73.92 ಲಕ್ಷ, 2ಎ: 77.78 ಲಕ್ಷ, 2ಬಿ: 75.25 ಲಕ್ಷ, 3ಎ: 72.99 ಲಕ್ಷ, ಮತ್ತು 3ಬಿ: 81.37 ಲಕ್ಷ ಜನಸಂಖ್ಯೆ ಹೊಂದಿದ್ದಾರೆ.

ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವರದಿಯಲ್ಲಿರುವ ಅಂಕಿ-ಅಂಶಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅವರ ಪ್ರಕಾರ, ಈ ವರದಿಯಲ್ಲಿ ತಮ್ಮ ಸಮುದಾಯದ ಜನಸಂಖ್ಯೆಯನ್ನು ತೀರಾ ಕಡಿಮೆ ತೋರಿಸಲಾಗಿದೆ. ಈ ಬಗ್ಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, “ವೈಜ್ಞಾನಿಕ ಪ್ರಮಾಣಗಳನ್ನು ಅನುಸರಿಸಿ ಹೊಸ ಜಾತಿ ಗಣತಿ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ. ಒಕ್ಕಲಿಗ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಕೂಡ ಹಳೆಯ ಸಮೀಕ್ಷೆ ಲೋಪದೋಷಗಳಿಂದ ಕೂಡಿದ ಹಿನ್ನೆಲೆಯಲ್ಲಿ ಹೊಸ ಸಮೀಕ್ಷೆಗೆ ಒತ್ತಾಯಿಸಿದ್ದಾರೆ.

ಹಿಂದುಳಿದ ವರ್ಗಗಳ ಬೆಂಬಲ

ಇನ್ನೊಂದೆಡೆ, ಹಲವು ಹಿಂದುಳಿದ ವರ್ಗಗಳ ಮುಖಂಡರು ಈ ವರದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಎಚ್.ಎಂ. ರೇವಣ್ಣ, ಉಮಾಶ್ರೀ ಮತ್ತು ಇತರರು, “ಜಾತಿ ಗಣತಿ ವರದಿಯ ಶಿಫಾರಸುಗಳನ್ನು ಸರ್ಕಾರ ತಕ್ಷಣ ಜಾರಿಗೆ ತರುವಂತೆ” ಆಗ್ರಹಿಸಿದ್ದಾರೆ.

ಇಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಜಾತಿ ಗಣತಿ ವರದಿಯ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಈ ತೀರ್ಮಾನವು ರಾಜ್ಯದ ಭವಿಷ್ಯ ರಾಜಕೀಯ ಸಮೀಕರಣಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದ್ದು, ಎಲ್ಲ ಸಮುದಾಯಗಳ ನೋಟ ಈಗ ಸಂಪುಟದತ್ತ ಗಮನ ಹರಿಸಿವೆ.

Exit mobile version