ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟವು ಗುರುವಾರ ನಡೆದ ಸಭೆಯಲ್ಲಿ 17 ಮಹತ್ವದ ವಿಧೇಯಕಗಳಿಗೆ ಒಪ್ಪಿಗೆ ನೀಡಿದೆ. ಇವುಗಳಲ್ಲಿ ವಿವಾಹಿತ ಮಗಳಿಗೂ ಅನುಕಂಪದ ಉದ್ಯೋಗ, ಸಹಕಾರ ಸಂಘಗಳಲ್ಲಿ ಮೀಸಲಾತಿ, ಒಬಿಸಿ ನಿರುದ್ಯೋಗಿಗಳಿಗೆ ವಿದ್ಯುತ್ ವಾಹನ ಖರೀದಿಗೆ ಸಹಾಯಧನ, ದೇವದಾಸಿಯರ ಮಕ್ಕಳ ಕಲ್ಯಾಣಕ್ಕೆ ಸೌಲಭ್ಯಗಳು ಸೇರಿವೆ. ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಈ ವಿವರಗಳನ್ನು ತಿಳಿಸಿದರು.
ಪ್ರಮುಖ ವಿಧೇಯಕಗಳು ಮತ್ತು ನಿರ್ಧಾರಗಳು:
1. ವಿವಾಹಿತ ಮಗಳಿಗೆ ಅನುಕಂಪದ ಉದ್ಯೋಗ
ಕುಟುಂಬ ಸದಸ್ಯರ ವ್ಯಾಖ್ಯಾನದಲ್ಲಿ “ವಿವಾಹಿತ ಮಗಳು” ಎಂಬ ಪದವನ್ನು ಸೇರಿಸಲು ಸಂಪುಟವು ಒಪ್ಪಿಗೆ ನೀಡಿದೆ. ಇದರಿಂದ ಸರ್ಕಾರಿ ನೌಕರರ ಕುಟುಂಬದ ವಿವಾಹಿತ ಮಗಳಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗಾವಕಾಶ ದೊರೆಯಲಿದೆ.
2. ಸಹಕಾರ ಸಂಘಗಳಲ್ಲಿ ಮೀಸಲಾತಿ
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ, 2025 ಮತ್ತು ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ, 2025ಕ್ಕೆ ಒಪ್ಪಿಗೆ ನೀಡಲಾಗಿದೆ. ಈ ವಿಧೇಯಕಗಳು ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತರಲು ಅವಕಾಶ ಕಲ್ಪಿಸುತ್ತವೆ.
3. ಒಬಿಸಿ ನಿರುದ್ಯೋಗಿಗಳಿಗೆ ವಿದ್ಯುತ್ ವಾಹನ ಸಹಾಯಧನ
ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಆಹಾರ ಕಿಯೋಸ್ಕ್‌ಗಾಗಿ ವಿದ್ಯುತ್ ಚಾಲಿತ ನಾಲ್ಕು ಚಕ್ರದ ವಾಹನ ಖರೀದಿಗೆ ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡಲು 33.09 ಕೋಟಿ ರೂ. ವೆಚ್ಚದಲ್ಲಿ 1103 ವಾಹನಗಳ ಖರೀದಿಗೆ ಅನುಮೋದನೆ. ಈ ಯೋಜನೆಯನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಇ-ಪೋರ್ಟಲ್‌ನಲ್ಲಿ ಕೈಗೊಳ್ಳಲಾಗುವುದು.
4. ಶೀತಲ ಘಟಕಗಳ ನಿರ್ಮಾಣಕ್ಕೆ ಪರಿಷ್ಕೃತ ಅಂದಾಜು
ಕೃಷಿ ಇಲಾಖೆಯ 13 ಶೀತಲ ಘಟಕಗಳ ನಿರ್ಮಾಣಕ್ಕೆ 171.91 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ. ಹೆಚ್ಚುವರಿ 47.81 ಕೋಟಿ ರೂ. ವೆಚ್ಚವನ್ನು ರೈತ ಸಂಪರ್ಕ ಕೇಂದ್ರಗಳ ಸೇವಾ ಶುಲ್ಕದಿಂದ ಭರಿಸಲಾಗುವುದು. ಈ ಯೋಜನೆಯ ಮೂಲ ವೆಚ್ಚ 124.10 ಕೋಟಿ ರೂ. ಆಗಿತ್ತು.
5. ದೇವದಾಸಿಯರ ಮಕ್ಕಳ ಕಲ್ಯಾಣ
ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ವಿಧೇಯಕ, 2025ಕ್ಕೆ ಒಪ್ಪಿಗೆ. ಈ ವಿಧೇಯಕವು 1982 ಮತ್ತು 2009ರ ದೇವದಾಸಿ ಕಾಯ್ದೆಗಳನ್ನು ರದ್ದುಗೊಳಿಸಿ, ದೇವದಾಸಿಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣಕ್ಕಾಗಿ ಸಮಗ್ರ ಕ್ರಮಗಳನ್ನು ಒದಗಿಸಲಿದೆ.
6. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸೌಲಭ್ಯ
15000 ಟೂ-ಟಯರ್ ಕಾಟ್‌ಗಳು (40 ಕೋಟಿ ರೂ.) ಮತ್ತು 15000 ಕಾಯರ್ ಮ್ಯಾಟ್ರಿಸ್‌ಗಳು (10 ಕೋಟಿ ರೂ.) ಖರೀದಿಗೆ ಒಪ್ಪಿಗೆ. ಈ ಸೌಲಭ್ಯವನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಇ-ಪೋರ್ಟಲ್ ಮೂಲಕ ಸರಬರಾಜು ಮಾಡಲಾಗುವುದು
7. ಕೃಷಿ ಬೆಲೆ ಆಯೋಗದ ತಿದ್ದುಪಡಿ
ಕರ್ನಾಟಕ ಕೃಷಿ ಬೆಲೆ ಆಯೋಗದ ಕರ್ತವ್ಯಗಳಿಗೆ ತಿದ್ದುಪಡಿ ಆದೇಶಕ್ಕೆ ಘಟನೋತ್ತರ ಅನುಮೋದನೆ. ಇದರಿಂದ ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸಲು ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
8. ಕಿತ್ತೂರಿನಲ್ಲಿ 100 ಹಾಸಿಗೆ ಆಸ್ಪತ್ರೆ
ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 33.78 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ. ಈ ಯೋಜನೆಯು NHM ಮತ್ತು SDP ಅನುದಾನದಿಂದ ಜಾರಿಗೊಳ್ಳಲಿದೆ.
9. ಬೀದರ್‌ನಲ್ಲಿ ಕ್ಯಾನ್ಸರ್ ಆಸ್ಪತ್ರೆ
ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ 100 ಹಾಸಿಗೆ ಕ್ಯಾನ್ಸರ್ ಆಸ್ಪತ್ರೆಗೆ 36 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ.
10. ವರದಾ ನದಿಯಿಂದ ಕೆರೆ ಭರ್ತಿ
ಹಾವೇರಿ ಜಿಲ್ಲೆಯ ವರದಾ ನದಿಯಿಂದ 111 ಕೆರೆಗಳನ್ನು 220 ಕೋಟಿ ರೂ. ವೆಚ್ಚದಲ್ಲಿ ತುಂಬಿಸುವ ಯೋಜನೆಗೆ ಒಪ್ಪಿಗೆ. ಇದರಿಂದ ಅಂತರ್ಜಲ ಮಟ್ಟ ಸುಧಾರಿಸಲಿದೆ.
11. ಸೊಕನಾದಗಿ ನೀರಾವರಿ ಯೋಜನೆ
ಬಾಗಲಕೋಟೆ ಜಿಲ್ಲೆಯ ಸೊಕನಾದಗಿ ಗ್ರಾಮಕ್ಕೆ 588 ಹೆಕ್ಟೇರ್‌ಗೆ 17 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಸೌಲಭ್ಯಕ್ಕೆ ಅನುಮೋದನೆ.
12. ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸೌಲಭ್ಯ
ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ 50% ವಿದ್ಯಾರ್ಥಿಗಳ ಕಡ್ಡಾಯ ನಿಯಮವನ್ನು ತೆಗೆದುಹಾಕಲು ತಿದ್ದುಪಡಿ.
13. ಜಾಲಹಳ್ಳಿ ದೇವಸ್ಥಾನದ ಜಮೀನು ವಿಸ್ತರಣೆ
ಜಾಲಹಳ್ಳಿ ಹನುಮಂತ ದೇವಸ್ಥಾನದ 1.32 ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು 20 ವರ್ಷದಿಂದ 30 ವರ್ಷಕ್ಕೆ ವಿಸ್ತರಣೆಗೆ ಒಪ್ಪಿಗೆ.
14. ತಲಕಾಡು ಪಟ್ಟಣ ಪಂಚಾಯಿತಿ
ಮೈಸೂರು ಜಿಲ್ಲೆಯ ತಲಕಾಡು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ.
15. ಭಟ್ಕಳ ಮತ್ತು ಇಂಡಿ ನಗರಸಭೆ
ಭಟ್ಕಳ ಮತ್ತು ಇಂಡಿ ಪುರಸಭೆಗಳನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ.
16. ಕೈವಾರ ಪಟ್ಟಣ ಪಂಚಾಯಿತಿ
ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಮತ್ತು ಮಸ್ತೇನಹಳ್ಳಿಯನ್ನು ಸೇರಿಸಿ ಕೈವಾರ ಪಟ್ಟಣ ಪಂಚಾಯಿತಿಯಾಗಿ ರಚಿಸಲು ಒಪ್ಪಿಗೆ.
17. ಪಾಂಡವಪುರ ಒಳಚರಂಡಿ ಯೋಜನೆ
ಪಾಂಡವಪುರದಲ್ಲಿ ಒಳಚರಂಡಿ ಕಾಮಗಾರಿಗೆ 11.62 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ.