ರಾಜ್ಯ ಬಜೆಟ್‌ 2026: ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆ..!

Untitled design (63)

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2026-27ನೇ ಸಾಲಿನ ಕರ್ನಾಟಕ ಬಜೆಟ್ ಅನ್ನು ಮಂಡಿಸುವ ಮೂಲಕ ತಮ್ಮ 17ನೇ ಆಯವ್ಯಯದ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದಾರೆ. ₹4.49 ಲಕ್ಷ ಕೋಟಿ ಗಾತ್ರದ ಈ ಬೃಹತ್ ಬಜೆಟ್‌ನಲ್ಲಿ ಮಂಡಿಸಿದ್ದಾರೆ. ಆದರೆ ಇದು ರಾಜ್ಯದ ಬೆನ್ನೆಲುಬಾಗಿರುವ ಸರ್ಕಾರಿ ನೌಕರರ ಪಾಲಿಗೆ ಇದು ಸಂಪೂರ್ಣ ನಿರಾಸೆಯನ್ನು ತಂದಿದೆ. ತಮ್ಮ ಬಹುದಿನಗಳ ಬೇಡಿಕೆಗಳಿಗೆ ಬಜೆಟ್‌ನಲ್ಲಿ ಉತ್ತರ ಸಿಗಬಹುದು ಎಂದು ಕಾದಿದ್ದ ನೌಕರರಿಗೆ ಸಿದ್ದರಾಮಯ್ಯ ಅವರು ತಣ್ಣೀರು ಸುರಿದಿದ್ದಾರೆ.

ಹುಸಿಹೋದ ಪಿಂಚಣಿ ನಿರೀಕ್ಷೆ

ಸರ್ಕಾರಿ ನೌಕರರ ಅತ್ಯಂತ ಪ್ರಮುಖ ಬೇಡಿಕೆಯಾಗಿದ್ದ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸುವ ವಿಷಯದಲ್ಲಿ ಸಿಎಂ ಯಾವುದೇ ಅಧಿಕೃತ ಘೋಷಣೆ ಮಾಡಲಿಲ್ಲ. ನೌಕರರ ಸಂಘವು ಹಲವಾರು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ, ಬಜೆಟ್ ಭಾಷಣದಲ್ಲಿ ಈ ಬಗ್ಗೆ ಉಲ್ಲೇಖವಿಲ್ಲದಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಇದರೊಂದಿಗೆ ಜಿಲ್ಲಾ ಮಟ್ಟದಲ್ಲಿ ಮಿಲಿಟರಿ ಮಾದರಿಯ ‘ನೌಕರರ ಕ್ಯಾಂಟೀನ್’ ಸ್ಥಾಪನೆಯ ಬೇಡಿಕೆಯೂ ಮೂಲೆಗುಂಪಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ

ಸರ್ಕಾರಿ ನೌಕರರಿಗೆ ನಿರಾಸೆಯಾಗಿದ್ದರೂ, ನಿರುದ್ಯೋಗಿಗಳಿಗೆ ಬಜೆಟ್‌ನಲ್ಲಿ ಭರವಸೆ ನೀಡಲಾಗಿದೆ. ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಪ್ರಮುಖ ಇಲಾಖೆಗಳಲ್ಲಿ ಖಾಲಿಯಿರುವ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುವುದಾಗಿ ಸಿಎಂ ಘೋಷಿಸಿದ್ದಾರೆ.

ವಿಶೇಷವೆಂದರೆ, ಉದ್ಯೋಗ ನೇಮಕಾತಿಗಳಲ್ಲಿ ಕಾನೂನು ಹೋರಾಟಗಳಿಂದ ಉಂಟಾಗಿದ್ದ ವಿಳಂಬವನ್ನು ಗಮನದಲ್ಲಿಟ್ಟುಕೊಂಡು, ಅಭ್ಯರ್ಥಿಗಳ ಹಿತದೃಷ್ಟಿಯಿಂದ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನೆಮ್ಮದಿ ತಂದಿದೆ.

ಆಡಳಿತ ಸುಧಾರಣೆ ಮತ್ತು AI ತಂತ್ರಜ್ಞಾನ

ಆಡಳಿತದಲ್ಲಿ ಪಾರದರ್ಶಕತೆ ತರಲು ಸಿದ್ದರಾಮಯ್ಯ ಸರ್ಕಾರ ತಂತ್ರಜ್ಞಾನಕ್ಕೆ ಒತ್ತು ನೀಡಿದೆ. ಆರ್.ವಿ. ದೇಶಪಾಂಡೆ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುವ ಭರವಸೆ ನೀಡಲಾಗಿದೆ.

ನೌಕರರ ಸಂಘದ ಪ್ರಮುಖ ಬೇಡಿಕೆಗಳು ಏನಿದ್ದವು ?

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರದ ಮುಂದೆ ಮುಖ್ಯವಾಗಿ ಮೂರು ಬೇಡಿಕೆಗಳನ್ನು ಇಟ್ಟಿತ್ತು:

  1. NPS ರದ್ದು ಮತ್ತು OPS ಜಾರಿ.

  2. MSIL ಮೂಲಕ ಜಿಲ್ಲೆಗಳಲ್ಲಿ ನೌಕರರ ಕ್ಯಾಂಟೀನ್ ಪ್ರಾರಂಭ.

  3. ಕರ್ತವ್ಯನಿರತ ನೌಕರರ ಮೇಲೆ ನಡೆಯುವ ಹಲ್ಲೆ ಮತ್ತು ಕಿರುಕುಳ ತಡೆಯಲು ಕಠಿಣ ಕಾನೂನು ಕ್ರಮ.

ಆದರೆ ಈ ಯಾವುದೇ ಬೇಡಿಕೆಗಳ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟನೆ ಸಿಕ್ಕಿಲ್ಲ. ರಾಜ್ಯ ಸರ್ಕಾರಕ್ಕೆ ಆದಾಯದ ಒತ್ತಡ ಹೆಚ್ಚಿರುವುದರಿಂದ ಹಣಕಾಸಿನ ಸಮತೋಲನ ಕಾಪಾಡುವುದು ಸಿಎಂ ಅವರಿಗೆ ಸವಾಲಾಗಿತ್ತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಟ್ಟಾರೆಯಾಗಿ, 2026ರ ಬಜೆಟ್ ನೌಕರರ ಸಂಘಟನೆಯ ಪಾಲಿಗೆ ಒಂದು ‘ಶೂನ್ಯ ಸಮಾಧಾನ’ದ ಆಯವ್ಯಯವಾಗಿದೆ.

Exit mobile version