ರಾಜ್ಯದ ಎಲ್ಲಾ ಕಣ್ಣುಗಳು ಇಂದು ವಿಧಾನಸೌಧದ ಮೇಲೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 17ನೇ ದಾಖಲೆಯ ಬಜೆಟ್ ಮಂಡಿಸಲು ಸಿದ್ಧರಾಗಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ಅಥವಾ ಹಣಕಾಸು ಸಚಿವರು ಮಂಡಿಸಿದ ಅತ್ಯಧಿಕ ಬಜೆಟ್‌ಗಳ ಸಾಧನೆಯಾಗಿದೆ.
ಬೆಳಗ್ಗೆಯಿಂದಲೇ ಚಟುವಟಿಕೆ ಕಾವೇರಿ ನಿವಾಸದಿಂದ ರೇಷ್ಮೆ ಪಂಚೆ-ಶರ್ಟ್ ತೊಟ್ಟು ಬಜೆಟ್ ಸೂಟ್‌ಕೇಸ್ ಹಿಡಿದು ಹೊರಟ ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷದ ನಾಯಕರು, ಕಾಂಗ್ರೆಸ್ ಮುಖಂಡರು, ಹಾಸನ-ಮಂಡ್ಯದ ಕಾರ್ಯಕರ್ತರು ಶುಭ ಹಾರೈಕೆಗಳನ್ನು ಕೋರಿದರು. “ದೇಶದ ಬಜೆಟ್ ಕೂಡ ಮಂಡಿಸುವಂತಾಗಲಿ” ಎಂದು ಹಲವರು ಆಶೀರ್ವಾದ ನೀಡಿದ್ದಾರೆ. ಕೆಲವು ಮುಖಂಡರು ಸಿಎಂಗೆ ಕಪ್ಪು ಬಣ್ಣದ ಸೂಟ್‌ಕೇಸ್ ನೀಡಿ ಶುಭೇಚ್ಛೆ ಸಲ್ಲಿಸಿದರು.
ಸಂಪುಟ ಸಭೆಯ ನಂತರ ಮಂಡನೆ ಬೆಳಗ್ಗೆ 9.45ಕ್ಕೆ ಕಾವೇರಿ ನಿವಾಸದಲ್ಲಿ ಸಚಿವ ಸಂಪುಟ ಸಭೆ ನಡೆಸಿ ಬಜೆಟ್‌ಗೆ ಅಂತಿಮ ಅನುಮೋದನೆ ಪಡೆದ ಸಿಎಂ, 10.15ಕ್ಕೆ ವಿಧಾನಸೌಧದಲ್ಲಿ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಇಲಾಖೆಯ ಅಧಿಕಾರಿಗಳು ಬಜೆಟ್ ಬುಕ್‌ಗಳನ್ನು ಸಿಎಂಗೆ ಹಸ್ತಾಂತರಿಸಿದ್ದಾರೆ. ವಿಧಾನಸೌಧಕ್ಕೆ ಬಜೆಟ್ ಬುಕ್‌ಗಳನ್ನು ತಂದ ಸಿಬ್ಬಂದಿ ಸಹ ಇಂದು ಬೆಳಗ್ಗೆಯಿಂದಲೇ ಸಕ್ರಿಯರಾಗಿದ್ದರು.
ಬಜೆಟ್ ಗಾತ್ರ ಮತ್ತು ಜನರ ನಿರೀಕ್ಷೆಗಳು:
ಈ ಬಾರಿಯ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ತಲುಪುವ ನಿರೀಕ್ಷೆ ಇದೆ. ಜನರು ಇಂದಿನ ಬಜೆಟ್‌ನಲ್ಲಿ
- ಹೊಸ ಯೋಜನೆಗಳ ಘೋಷಣೆ
- ಜನರ ಆರ್ಥಿಕ ಹೊರೆ ಇಳಿಕೆ
- ಹೆಚ್ಚುವರಿ ಸಾಲದ ಭಾರ
- ಮಹಿಳೆಯರಿಗೆ ವರ್ಷಕ್ಕೆ ಎರಡು ಸೀರೆ
- ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿಗೆ ಆದ್ಯತೆ ಇವುಗಳ ಬಗ್ಗೆ ಆಸಕ್ತಿಯಿಂದ ಕಾಯುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಇಂದು ಐತಿಹಾಸಿಕ ಬಜೆಟ್ ಮಂಡಿಸುತ್ತಿರುವುದರಿಂದ ರಾಜ್ಯಾದ್ಯಂತ ಚರ್ಚೆಗಳು ಜೋರಾಗಿವೆ. ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಹಲವು ಬಸ್ ನಿಲ್ದಾಣಗಳಲ್ಲಿ ಸಹ ಏರ್ಪಡಿಸಲಾಗಿದೆ.





