ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಅಡಿಕೆ ಬೆಳೆಗಾರರಿಗೆ ಮಹತ್ವದ ನೆರವು ಘೋಷಿಸಲಾಗಿದೆ. ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟುಮಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ರೋಗ ಹಾಗೂ ಇತರ ಕೀಟ-ರೋಗಗಳ ನಿಯಂತ್ರಣಕ್ಕಾಗಿ ₹10 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಹಣವನ್ನು ಅಧ್ಯಯನ, ಸಂಶೋಧನೆ, ರೈತರ ಜಾಗೃತಿ ಕಾರ್ಯಕ್ರಮಗಳು ಮತ್ತು ಸಮುದಾಯ ಆಧಾರಿತ ನಿಯಂತ್ರಣ ಕ್ರಮಗಳಿಗೆ ಬಳಸಲಾಗುವುದು.
ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ, ಅಡಿಕೆ ಬೆಳೆಗೆ ಕಾಣಿಸಿಕೊಳ್ಳುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ರೋಗಗಳ ಜೊತೆಗೆ ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳು ಮತ್ತು ಬಿಳಿ ನೊಣಗಳ ಸಮಸ್ಯೆಯನ್ನು ಎದುರಿಸಲು ಸಮುದಾಯ ಆಧಾರಿತ ರೋಗ-ಕೀಟ ನಿಯಂತ್ರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು. ಈ ಯೋಜನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ₹64 ಕೋಟಿ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ಸಂಗ್ರಹಣೆಗೆ ಉತ್ತೇಜನ ನೀಡುವ ಗುರಿಯೊಂದಿಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳ ನಿರ್ಮಾಣಕ್ಕೆ ₹64 ಕೋಟಿ ವೆಚ್ಚ ಮೀಸಲಿಡಲಾಗಿದೆ. ರಾಜ್ಯದ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಹಂತಹಂತವಾಗಿ ಶೀತಲಗೃಹಗಳನ್ನು ನಿರ್ಮಿಸುವ ಯೋಜನೆಯೂ ಸರ್ಕಾರದ ಮುಂದಿದೆ.
ತೋಟಗಾರಿಕೆಯನ್ನು ಆದಾಯದ ಮೂಲವಾಗಿ ಬೆಳೆಸುವ ಗುರಿ ಸರ್ಕಾರವು ತೋಟಗಾರಿಕೆಯನ್ನು ರೈತರ ಆದಾಯ ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 89,000 ಹೆಕ್ಟೇರ್ ಪ್ರದೇಶದಲ್ಲಿ ಹೊಸ ತೋಟಗಾರಿಕೆ ಬೆಳೆಗಳನ್ನು ಅಳವಡಿಸಲಾಗಿದೆ. ಇದೇ ಅವಧಿಯಲ್ಲಿ 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಲಾಗಿದ್ದು, 2.36 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ ₹2,378 ಕೋಟಿ ಪರಿಹಾರ ನೀಡಲಾಗಿದೆ. ಜೊತೆಗೆ 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳನ್ನು ನಿರ್ಮಿಸಲು ಸಹಾಯ ಮಾಡಲಾಗಿದೆ.
ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿರುವ ಲಭ್ಯ ಜಮೀನನ್ನು ಬಳಸಿಕೊಂಡು ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಪಿಪಿಪಿ (PPP) ಮಾದರಿಯಲ್ಲಿ ಸ್ಥಾಪಿಸುವ ಯೋಜನೆಯನ್ನೂ ಸರ್ಕಾರ ರೂಪಿಸಿದೆ.
ಈ ಘೋಷಣೆಗಳು ಅಡಿಕೆ, ತೆಂಗು ಮತ್ತು ತೋಟಗಾರಿಕೆ ಬೆಳೆಗಾರರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸುವ ಗುರಿಗೆ ದೊಡ್ಡ ಹೆಜ್ಜೆಯಾಗಿದೆ.





