ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ದಾಖಲೆಯ 17ನೇ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯ ಆದಾಯವನ್ನು ಗಣನೀಯವಾಗಿ ಹೆಚ್ಚಿಸುವ ಹೊಸ ತಂತ್ರ ಘೋಷಿಸಿದ್ದಾರೆ. ಮದ್ಯದಲ್ಲಿ ಇರುವ ಆಲ್ಕೋಹಾಲ್ ಅಂಶ ಆಧಾರದ ಮೇಲೆ ತೆರಿಗೆ ವಿಧಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಈ ಹೊಸ ನೀತಿಯ ಪ್ರಕಾರ, ಮದ್ಯದ ಆಲ್ಕೋಹಾಲ್ ಪ್ರಮಾಣ ಹೆಚ್ಚಿದಷ್ಟು ತೆರಿಗೆಯೂ ಹೆಚ್ಚಾಗಲಿದೆ. ಕಡಿಮೆ ಆಲ್ಕೋಹಾಲ್ ಅಂಶವಿರುವ ಮದ್ಯಕ್ಕೆ ಕಡಿಮೆ ತೆರಿಗೆ ವಿಧಿಸಲಾಗುವುದು. ಇದರಿಂದ ಮದ್ಯದ ಬೆಲೆಯಲ್ಲಿ ಹಂತಹಂತವಾಗಿ ಏರಿಕೆ ಆಗುವ ಸಾಧ್ಯತೆ ಇದೆ. ಈ ನಿರ್ಧಾರದ ಹಿಂದಿನ ಉದ್ದೇಶ ಅಬಕಾರಿ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಹೆಚ್ಚು ಆಲ್ಕೋಹಾಲ್ ಅಂಶವಿರುವ ಮದ್ಯದ ಬಳಕೆಯನ್ನು ನಿಯಂತ್ರಿಸುವುದೂ ಆಗಿದೆ ಎಂದು ಸರ್ಕಾರ ವಿವರಿಸಿದೆ.
ಅಬಕಾರಿ ಆದಾಯದ ಗುರಿ ಕಳೆದ ವರ್ಷ ಫೆಬ್ರವರಿ ಅಂತ್ಯದವರೆಗೆ ಅಬಕಾರಿ ಇಲಾಖೆಯಿಂದ ₹36,492 ಕೋಟಿ ರಾಜಸ್ವ ಸಂಗ್ರಹವಾಗಿತ್ತು (12.7% ಬೆಳವಣಿಗೆ). ಆದರೆ 2026-27ನೇ ಸಾಲಿಗೆ ಸರ್ಕಾರವು ₹45,000 ಕೋಟಿ ರಾಜಸ್ವ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ಈ ಹೊಸ ತೆರಿಗೆ ವ್ಯವಸ್ಥೆಯಿಂದ ಗುರಿ ಸಾಧಿಸಲು ಸಹಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಫ್ಯಾಕ್ಟರಿ ದರದ ಆಧಾರದಲ್ಲಿ ಏಕರೂಪ ಸುಂಕ ಈಗಿರುವ ವ್ಯವಸ್ಥೆಯಲ್ಲಿ ವಿವಿಧ ರೀತಿಯ ಮದ್ಯಕ್ಕೆ ವಿಭಿನ್ನ ತೆರಿಗೆ ದರಗಳಿದ್ದವು. ಇನ್ನು ಮುಂದೆ ಎಕ್ಸ್-ಫ್ಯಾಕ್ಟರಿ ದರಪಟ್ಟಿಯ ಆಧಾರದ ಮೇಲೆ ಏಕರೂಪದ ಅಬಕಾರಿ ಸುಂಕವನ್ನು ಹಂತಹಂತವಾಗಿ ಹೆಚ್ಚಿಸಲು ಸರ್ಕಾರ ಯೋಜಿಸಿದೆ. ಇದರಿಂದ ಮದ್ಯದ ಬೆಲೆಯಲ್ಲಿ ಏರುಪೇರು ಆಗುವ ಸೂಚನೆ ಸಿಗುತ್ತಿದೆ.
ಸರ್ಕಾರದ ಈ ನಿರ್ಧಾರವು ಮದ್ಯಪ್ರಿಯರಲ್ಲಿ ಆತಂಕ ಮೂಡಿಸಿದ್ದು, ಬೆಲೆ ಏರಿಕೆಯಿಂದ ಆದಾಯದ ಮೇಲೆ ಪರಿಣಾಮ ಬೀಳಬಹುದು ಎಂಬ ಚಿಂತೆ ವ್ಯಕ್ತವಾಗುತ್ತಿದೆ. ಆದರೆ ಸರ್ಕಾರವು ಇದನ್ನು ರಾಜ್ಯದ ಆದಾಯ ಹೆಚ್ಚಿಸುವ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಸೂಕ್ತವಾದ ಕ್ರಮ ಎಂದು ವಿವರಿಸಿದೆ.





