ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಬಿಸಿಲು ಮತ್ತು ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಚಳಿ ಮತ್ತು ಮಂಜಿನ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ಹಗಲು ವೇಳೆ ಗರಿಷ್ಠ ತಾಪಮಾನದಲ್ಲಿ ಸ್ಪಷ್ಟ ಏರಿಕೆ ಕಾಣಿಸಿಕೊಳ್ಳಲಿದೆ.
ರಾಜ್ಯದಲ್ಲಿ ಒಣಹವೆ ಪ್ರಾಬಲ್ಯ ಹೆಚ್ಚಾಗಲಿದೆ. ಕಳೆದ ವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರ ಮಳೆಯಾಗಿದ್ದರೂ, ಮುಂದಿನ ಒಂದು ವಾರ ಮಳೆ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಕನಿಷ್ಠ ತಾಪಮಾನದಲ್ಲಿ ಇಳಿಕೆ
ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ವಾಡಿಕೆಗೆ ಹೋಲಿಸಿದರೆ 3.1 ರಿಂದ 5.0 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆ ಕಂಡಿದೆ. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಚಳಿಯನ್ನು ಜನರು ಅನುಭವಿಸುತ್ತಿದ್ದಾರೆ. ಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ತಂಪಾದ ಗಾಳಿ ಬೀಸುವ ಸಾಧ್ಯತೆ ಇದೆ.
ಆದರೆ ಇದೇ ಉತ್ತರ ಕರ್ನಾಟಕದ ಒಂದೆರಡು ಭಾಗಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿ ದಾಖಲಾಗುತ್ತಿದೆ. ಇದರಿಂದ ಚಳಿ ಮತ್ತು ಬಿಸಿಲಿನ ಮಿಶ್ರ ಅನುಭವ ಜನರಿಗೆ ಎದುರಾಗುತ್ತಿದೆ.
ಬೆಂಗಳೂರಿನಲ್ಲಿ ಹವಾಮಾನ ಸ್ಥಿತಿ
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಳಿ ಹೆಚ್ಚಾಗಿದ್ದು, ಕನಿಷ್ಠ ತಾಪಮಾನವು ಕ್ರಮವಾಗಿ 9.7 ಮತ್ತು 9.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬೆಳಗ್ಗೆ ಹಾಗೂ ರಾತ್ರಿ ವೇಳೆ ಚಳಿ ಗಾಳಿ ಬೀಸುವುದರಿಂದ ಜನರು ಸ್ವೆಟರ್, ಜಾಕೆಟ್‌ಗಳ ಮೊರೆ ಹೋಗುತ್ತಿದ್ದಾರೆ.
ಹಗಲು ವೇಳೆಗೆ ಬಿಸಿಲು ಹೆಚ್ಚಾಗುತ್ತಿದ್ದು, ಒಣಹವೆ ವಾತಾವರಣ ನಿರ್ಮಾಣವಾಗುತ್ತಿದೆ. ಯಾವುದೇ ಗಂಭೀರ ಹವಾಮಾನ ಬದಲಾವಣೆ ಅಥವಾ ಪ್ರಕೃತಿ ವೈಪರಿತ್ಯಗಳ ಮುನ್ಸೂಚನೆ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಇನ್ನೂ ಚಳಿ ಉಳಿದಿರುವ ಜಿಲ್ಲೆಗಳು
ರಾಜ್ಯದಲ್ಲಿ ಒಟ್ಟಾರೆ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದರೂ, ಕೆಲ ಜಿಲ್ಲೆಗಳಲ್ಲಿ ಚಳಿ ಇನ್ನೂ ಕಡಿಮೆಯಾಗಿಲ್ಲ. ಅವುಗಳಲ್ಲಿ ಪ್ರಮುಖವಾಗಿ ಕೋಲಾರ: 7.9 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ: 8.7 ಡಿಗ್ರಿ ಸೆಲ್ಸಿಯಸ್, ತುಮಕೂರು: 8.9 ಡಿಗ್ರಿ ಸೆಲ್ಸಿಯಸ್, ಹಾಸನ: 10.2 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು: 10.8 ಡಿಗ್ರಿ ಸೆಲ್ಸಿಯಸ್, ಮೈಸೂರು: 10.7 ಡಿಗ್ರಿ ಸೆಲ್ಸಿಯಸ್, ಮಂಡ್ಯ: 10.8 ಡಿಗ್ರಿ ಸೆಲ್ಸಿಯಸ್, ಬೆಳಗಾವಿ, ದಾವಣಗೆರೆ, ಚಿತ್ರದುರ್ಗ: 12.2 ಡಿಗ್ರಿ ಸೆಲ್ಸಿಯಸ್ ಈ ಜಿಲ್ಲೆಗಳಲ್ಲಿ ಬೆಳಗ್ಗೆ ಹಾಗೂ ರಾತ್ರಿ ವೇಳೆಗೆ ಚಳಿ ಹೆಚ್ಚು ಅನುಭವವಾಗುತ್ತಿದೆ.
ಇದೇ ವೇಳೆ, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಶಾಖದ ಅಲೆ (Heat Wave-like Condition) ಆರಂಭವಾಗಿದೆ ಎಂದು ಐಎಂಡಿ ತಿಳಿಸಿದೆ. ಹಗಲು ತಾಪಮಾನ ಹೆಚ್ಚಾಗುತ್ತಿರುವುದರಿಂದ ಜನರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಹವಾಮಾನ ತಜ್ಞರ ಪ್ರಕಾರ, ಮುಂದಿನ ಕೆಲವು ದಿನಗಳ ಕಾಲ ಯಾವುದೇ ತೀವ್ರ ಹವಾಮಾನ ವೈಪರಿತ್ಯಗಳ ಸಾಧ್ಯತೆ ಇಲ್ಲ. ಆದರೂ, ಬೆಳಗ್ಗೆ ಮತ್ತು ರಾತ್ರಿ ಚಳಿಯಿಂದ ರಕ್ಷಣೆ ಪಡೆದುಕೊಳ್ಳುವುದು ಹಾಗೂ ಹಗಲು ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯದಂತೆ ಎಚ್ಚರಿಕೆ ವಹಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
